Home ಟಾಪ್ ಸುದ್ದಿಗಳು ಸಿಲಿಂಡರ್ ಬೆಲೆ ಮತ್ತೆ ಏರಿಕೆ; ಹೆಚ್ಡಿಕೆ ಆಕ್ರೋಶ | ಬೆಲೆ ಏರಿಕೆ ಬಗ್ಗೆ RSS ದನಿ...

ಸಿಲಿಂಡರ್ ಬೆಲೆ ಮತ್ತೆ ಏರಿಕೆ; ಹೆಚ್ಡಿಕೆ ಆಕ್ರೋಶ | ಬೆಲೆ ಏರಿಕೆ ಬಗ್ಗೆ RSS ದನಿ ಎತ್ತಬೇಕು ಎಂದ ಮಾಜಿ ಸಿಎಂ

ಬೆಂಗಳೂರು: ನಿರಂತರವಾಗಿ ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಮೂಲಕ ಜನರ ಬದುಕಿಗೆ ಕೊಳ್ಳಿ ಇಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಇಂದು ಸರಣಿ ಟ್ವೀಟ್ ಮಾಡಿರುವ ಅವರು, ಈ ಟ್ವೀಟ್ʼನಲ್ಲಿಯೂ ಆರೆಸ್ಸೆಸ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇಂದಿನ ಬೆಳಗಿನ ಶಾಕ್! 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ 15 ರೂ. ಹೆಚ್ಚಳ. ಈ ಸಿಲಿಂಡರ್ ಬೆಲೆ ಈಗ 900 ರೂ. ಗಡಿಯಲ್ಲಿದೆ. 7 ವರ್ಷಗಳ ಅಚ್ಛೇದಿನದ ಭ್ರಮೆಯಲ್ಲಿ ಜನರ ಬದುಕು ಬೆಂಕಿಯಲ್ಲಿ ಬೇಯುತ್ತಿದೆ ಎಂದರು.

ಕೋವಿಡ್, ಬೆಲೆ ಏರಿಕೆಯಿಂದ ಜನಜೀವನ ಹಳ್ಳಹಿಡಿದು ಹೋಗಿದೆ. ಬಡ ಭಾರತದ ಜೀವ ಹಿಂಡುತ್ತಿರುವ ಶ್ರೀಮಂತ ಭಾರತದ ಸಾರಥ್ಯ ವಹಿಸಿರುವವರು ಒಂದಿಬ್ಬರು ಉದ್ಯಮಗಳ ಜೋಳಿಗೆ ತುಂಬಿ ಜನರ ಬಾಳಿಗೆ ಕೊಳ್ಳಿ ಇಡುತ್ತಿರುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಅನಿಯಂತ್ರಿತ ಬೆಲೆ ಏರಿಕೆ ಮಾಫಿಯಾ ಹಿಂದೆ ಇರುವ ಶಕ್ತಿಗಳ ಬಗ್ಗೆ ಬಿಜೆಪಿ ನಾಯಕರು ಮಾತನಾಡಲಿ ಎಂದು ಆಗ್ರಹಿಸಿದ್ದಾರೆ.

ದುಡಿಯುವ ಕೈಗಳಿಗೆ ಕೆಲಸವಿಲ್ಲ. ಅನ್ನಕ್ಕಾಗಿ ಹಾಹಾಕಾರವಿದೆ. ಸೇವೆ ಎಂದು ಸೋಗಲಾಡಿತನ ತೋರಿಸುವ RSS ಬೆಲೆ ಏರಿಕೆ ಬಗ್ಗೆ ಮಾತನಾಡಬೇಕು. ಬಡವರ ಭಾರತ, ಶ್ರೀಮಂತರ ಭಾರತದ ಬಗ್ಗೆ ಹೇಳಬೇಕು. ಅದಕ್ಕೆ ಕಾರಣವಾದ 7 ವರ್ಷಗಳ ಆಡಳಿತದ ಬಗ್ಗೆ ದನಿಯೆತ್ತಬೇಕು. ಇಲ್ಲವಾದರೆ ಬಡವರ ಭಾರತದ ಆಕ್ರೋಶಕ್ಕೆ ನೀವು ತುತ್ತಾಗುವುದು ತಪ್ಪುವುದಿಲ್ಲ ಎಂದು ಹೇಳಿದರು.

Join Whatsapp
Exit mobile version