Home ಟಾಪ್ ಸುದ್ದಿಗಳು ನಾಳೆ ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ತಡೆ ನೀಡಿದ ಹೈಕೋರ್ಟ್

ನಾಳೆ ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ತಡೆ ನೀಡಿದ ಹೈಕೋರ್ಟ್

ಬೆಂಗಳೂರು: ನಾಳೆ ಸಾರಿಗೆ ನೌಕರರು ಹಮ್ಮಿಕೊಂಡಿದ್ದ ಮುಷ್ಕರಕ್ಕೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ. ಇದರಿಂದ ಪರೀಕ್ಷೆ ಬರೆಯಲು ಸಿದ್ಧರಾಗಿರುವ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.


ವಿವಿಧ ಬೇಡಿಕೆ ಈಡೇರಿಕೆಗಳಿಗೆ ಆಗ್ರಹಿಸಿ ನಾಳೆ ಶುಕ್ರವಾರ ಮುಷ್ಕರ ನಡೆಸುವುದಾಗಿ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿತ್ತು.
ಮೂರು ವಾರಗಳ ಕಾಲ ಮುಷ್ಕರಕ್ಕೆ ತಡೆ ನೀಡಿ ಉಚ್ಚನ್ಯಾಯಾಲಯ ಆದೇಶ ನೀಡಿದೆ. ಮುಷ್ಕರದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗಲಿದೆ, ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ತೆರಳಲು ತೊಂದರೆಯಾಗುತ್ತದೆ‌ ಹಾಗಾಗಿ ‌ಮುಷ್ಕರ ನಡೆಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ.


ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಎಚ್.ಎಂ.ವೆಂಕಟೇಶ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ  ಹೈಕೋರ್ಟ್ ಸಿಜೆ ಪ್ರಸನ್ನ ಬಿ.ವರಾಳೆ, ಅಶೋಕ್ ಎಸ್.ಕಿಣಗಿ ಅವರಿದ್ದ ಪೀಠ ಈ ಆದೇಶ ನೀಡಿದೆ.

ಮಾ.20ರಂದು ಕಾರ್ಮಿಕ ಇಲಾಖೆ ಆಯುಕ್ತರು ಸಭೆ ಕರೆದಿದ್ದರು. ಆದರೆ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಏಪ್ರಿಲ್ 6ರಂದು ಮುಂದಿನ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಹೈಕೋರ್ಟ್​​ಗೆ ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ಮಾಹಿತಿ ನೀಡಿದ್ದಾರೆ.

ಸರ್ಕಾರಿ ನೌಕರರ ಸರಿಸಮಾನ‌ ವೇತನಕ್ಕೆ ಆಗ್ರಹಿಸಿ ನಾಳೆಯಿಂದ (ಮಾರ್ಚ್ 24) ರಾಜ್ಯಾದ್ಯಂತ ಸಾರಿಗೆ ಸೇವೆ ಬಂದ್ ಆಗಲಿದೆ. ನಾಳೆಯಿಂದ ಸಾರಿಗೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಈ ಹಿಂದೆ ಮಾರ್ಚ್ 21ರಂದು ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದರು. ಈ ವೇಳೆ 15% ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಈಗ ಮತ್ತೆ ಸಮಾನ‌ ಮನಸ್ಕರ ವೇದಿಕೆ ಸಾರಿಗೆ ಮುಷ್ಕರಕ್ಕೆ ಕರೆ ನೀಡಿದೆ. ಸಾರಿಗೆ ನೌಕರರ ಮುಖಂಡ ಚಂದ್ರು ನಾಲ್ಕು ನಿಗಮದ ಬಸ್’​ಗಳನ್ನ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ.

ಸರಿಸಮಾನಾದ ವೇತನ:

ನಾಲ್ಕು ನಿಗಮಗಳ ನೌಕರರ ಸಂಘಕ್ಕೆ ಎಲೆಕ್ಷನ್ ಮಾಡಬೇಕು. ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ನಾಲ್ಕು ನಿಗಮಗಳ ನೌಕರರನ್ನು ಯಾವುದೇ ಷರತ್ತುಗಳಿಲ್ಲದೆ ಮರುನೇಮಕಾತಿ ಮಾಡಿಕೊಳ್ಳುವುದು, ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬಸ್ಥರ ಮೇಲೆ ದಾಖಲಾಗಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು, ಸಾರಿಗೆ ಸಂಸ್ಥೆಯಲ್ಲಿ ನಿವೃತ್ತಿಗೊಂಡಿರುವ ನೌಕರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ನೀಡುವುದು ಅವರಿಗೆ ಸರಿಯಾದ ರೀತಿ ಪಿಂಚಣೆ ಸೌಲಭ್ಯವನ್ನು ಒದಗಿಸಬೇಕು ಎಂಬುದು ನೌಕರರ ಬೇಡಿಕೆಗಳಾಗಿವೆ.  

Join Whatsapp
Exit mobile version