ದಮ್ಮಾಮ್: ಹಿಜಾಬ್ ಮುಸ್ಲಿಂ ಮಹಿಳೆಯರ ಸಾಂವಿಧಾನಿಕ ಹಕ್ಕಾಗಿದ್ದು, ಈ ಕುರಿತು ನ್ಯಾಯಾಲಯ ನೀಡಿರುವ ತೀರ್ಪು ನಿರಾಶದಾಯಕ ಹಾಗೂ ಅತ್ಯಂತ ಖೇದಕರ ಎಂದು ವುಮೆನ್ಸ್ ಫ್ರೆಟರ್ನಿಟಿ ಫೋರಂ, ಪೂರ್ವ ಪ್ರಾಂತ್ಯ ಅಧ್ಯಕ್ಷೆ ನೌಸಿಬಾ ಆದಮ್ ತಿಳಿಸಿದ್ದಾರೆ.
ಸಮವಸ್ತ್ರದ ನೆಪದಲ್ಲಿ ಕಾಲೇಜು ಆಡಳಿತದ ಕೋಮುವಾದಿ ಹಾಗೂ ತಾರತಮ್ಯದ ಕ್ರಮವನ್ನು ಪ್ರತಿಭಟಿಸಿ ನ್ಯಾಯಾಂಗದ ಮೊರೆ ಹೋದ ಎಲ್ಲಾ ವಿದ್ಯಾರ್ಥಿನಿಯರಿಗೆ ವ್ಯವಸ್ಥೆಯ ಮೇಲೆ ಭ್ರಮನಿರಸನ ಹುಟ್ಟಿಸುವ ತೀರ್ಪು ಇದಾಗಿದೆ ಅವರು ಇಂದು ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.
ಹಿಜಾಬ್ ಮಹಿಳೆಯರ ಸಾಂವಿಧಾನಿಕ ಹಕ್ಕಾಗಿರುವುದರಿಂದ ಈ ಕುರಿತು ಯಾವುದೇ ರಾಜಿ ಸಾಧ್ಯವಿಲ್ಲ. ಇಸ್ಲಾಮಿನಲ್ಲಿ ಯಾವುದು ಕಡ್ಡಾಯ, ಯಾವುದು ಕಡ್ಡಾಯವಲ್ಲ ಎನ್ನುವುದನ್ನು ತೀರ್ಪಿನಲ್ಲಿ ನಿರ್ಧರಿಸಿದ ಹೈಕೋರ್ಟ್ ಕ್ರಮ ಅತ್ಯಂತ ಖೇದಕರವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಇಸ್ಲಾಮಿನ ಪ್ರಮುಖ ಆಚರಣೆಯಾಗಿದೆ. ಈ ಕುರಿತು ಯಾವುದೇ ಅನುಮಾನ ಅಥವಾ ಗೊಂದಲಗಳಿಲ್ಲ. ಯಾವುದೇ ವ್ಯಕ್ತಿಗೆ ಆತನ/ ಆಕೆಯ ಸ್ವಾತಂತ್ರ್ಯವನ್ನು ನಿರಾಕರಿಸುವುದು ಸಾಧ್ಯವಿಲ್ಲ ಎಂಬ ಸಂವಿಧಾನದ 21ನೆ ವಿಧಿಯನ್ನು ಆಧರಿಸಲು ವಿಫಲವಾದ ಹೈಕೋರ್ಟ್ ಯಾವುದು ಇಸ್ಲಾಮಿನಲ್ಲಿ ಕಡ್ಡಾಯ ಅಥವಾ ಕಡ್ಡಾಯವಲ್ಲ ಎಂಬುದನ್ನು ಹೇಗೆ ತಾನೆ ನಿರ್ಣಯಿಸಬಹುದು? ತೀರ್ಪು ಸ್ಪಷ್ಟವಾಗಿ ಸಾಂವಿಧಾನಿಕ ಹಕ್ಕಿನ ನಿರಾಕರಣೆಯಾಗಿದೆ. ಸಂವಿಧಾನವನ್ನು ರಕ್ಷಿಸುವ ಬದಲು ನ್ಯಾಯಾಲಯವು ಅಸಂವಿಧಾನಿಕ ತೀರ್ಪಿನ ಮೂಲಕ ಅದನ್ನು ಅಪಾಯಕ್ಕೆ ತಳ್ಳಿದೆ ಎಂದು ಅವರು ಎಚ್ಚರಿಸಿದ್ದಾರೆ.
ವುಮೆನ್ಸ್ ಫ್ರೆಟರ್ನಿಟಿ ಫೋರಂ ಈ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಬೆಂಬಲವನ್ನು ಸೂಚಿಸುತ್ತದೆ. ನ್ಯಾಯವು ದೊರೆಯುವ ತನಕ ನಾವು ನಮ್ಮ ಸಹೋದರಿಯರೊಂದಿಗೆ ನಿಲ್ಲಲಿದ್ದೇವೆ. ಹಿಜಾಬ್ ಕುರಿತು ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಔಸಿಬಾ ಆದಂ ಒತ್ತಿ ಹೇಳಿದ್ದಾರೆ.