ಬೆಂಗಳೂರು: IMA ಹಗರಣ ಆರೋಪಿ ಮತ್ತು ಮಾಜಿ ಸಚಿವ ರೋಶನ್ ಬೇಗ್ ಅವರ ಆಸ್ತಿಯನ್ನು ಒಂದು ವಾರದೊಳಗೆ ಮುಟ್ಟುಗೋಲು ಹಾಕಲು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದು, ಮುಟ್ಟುಗೋಲು ಹಾಕಲು ಸರಕಾರ ವಿಳಂಬ ಮಾಡುತ್ತಿರುವುದರ ಬಗ್ಗೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ನ್ಯಾಯಾಲಯಕ್ಕೆ ಹೇಳಿಕೆ ನೀಡಿರುವ ಸರ್ಕಾರ, ಲಾಕ್‌ಡೌನ್ ಕಾರಣದಿಂದಾಗಿ ಮುಟ್ಟುಗೋಲು ಹಾಕಲು ಸಾಧ್ಯವಾಗಲಿಲ್ಲ ಎಂದು ಉತ್ತರಿಸಿದೆ. ದನ್ನು ತಿರಸ್ಕರಿಸಿದ ನ್ಯಾಯಾಲಯವು ಲಾಕ್ಡೌನ್ ಮತ್ತು ಮುಟ್ಟುಗೋಲು ಹಾಕುವುದರ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಐಎಂಎ ಹಗರಣದಲ್ಲಿ ಸಿಬಿಐ ತನ್ನ ತನಿಖೆಯನ್ನು ಮುಕ್ತಾಯಗೊಳಿಸಿದ್ದು, ಬೇಗ್ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದೆ ಎಂದು ಕೇಂದ್ರ ತನಿಖಾ ದಳದ ಎಸ್‌ಪಿಪಿ ಪ್ರಸನ್ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ವೇಳೆ ಪ್ರಕರಣದಲ್ಲಿ ಭಾಗಿಯಾಗಿರುವ ಐಪಿಎಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ತಕ್ಷಣ ಅನುಮತಿ ನೀಡುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.