Home ಟಾಪ್ ಸುದ್ದಿಗಳು ಸೋಮವಾರದೊಳಗೆ 4 ಕೋಟಿ ತೆರಿಗೆ ಪಾವತಿಸಲು ಮಂತ್ರಿ ಮಾಲ್ ಗೆ ಹೈಕೋರ್ಟ್ ಆದೇಶ: ಬೀಗ ತೆಗೆಯಲು...

ಸೋಮವಾರದೊಳಗೆ 4 ಕೋಟಿ ತೆರಿಗೆ ಪಾವತಿಸಲು ಮಂತ್ರಿ ಮಾಲ್ ಗೆ ಹೈಕೋರ್ಟ್ ಆದೇಶ: ಬೀಗ ತೆಗೆಯಲು ಬಿಬಿಎಂಪಿಗೆ ನಿರ್ದೇಶನ

ಬೆಂಗಳೂರು: ಶುಕ್ರವಾರ ಮಧ್ಯರಾತ್ರಿ ಮತ್ತು ಸೋಮವಾರ ಮಧ್ಯಾಹ್ನ 12 ಗಂಟೆಯಗೊಳಗೆ ತಲಾ 2 ಕೋಟಿಯಂತೆ ಒಟ್ಟು 4 ಕೋಟಿ ತೆರಿಗೆ ಹಣವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಪಾವತಿಸಬೇಕು” ಎಂದು ಮಂತ್ರಿ ಮಾಲ್ ಆಡಳಿತಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.


ಅಲ್ಲದೇ, ಬೆಂಗಳೂರಿನ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿಮಾಲ್ ಗೆ ಹಾಕಲಾಗಿರುವ ಬೀಗ ತೆರೆಯುವಂತೆ ಬಿಬಿಎಂಪಿಗೆ ಮಧ್ಯಂತರ ಆದೇಶ ಮಾಡಿದೆ. ಮೆಸರ್ಸ್ ಅಭಿಷೇಕ್ ಪ್ರೊಪ್ಬಿಲ್ಡ್ ಪ್ರೈವೇಟ್ ಲಿಮಿಟೆಡ್ ಮತ್ತು ಮೆಸರ್ಸ್ ಹಮಾರಾ ಶೆಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.


“ಶುಕ್ರವಾರ ಮಧ್ಯರಾತ್ರಿ 12 ಗಂಟೆಯೊಳಗೆ ಆರ್ಟಿಜಿಎಸ್ ಮೂಲಕ 2 ಕೋಟಿ ಮತ್ತು ಸೋಮವಾರ ಮಧ್ಯಾಹ್ನ 12 ಗಂಟೆಯ ಒಳಗೆ 2 ಕೋಟಿ ಪಾವತಿಸಬೇಕು. ಈ ಮಧ್ಯೆ, ಶನಿವಾರ ಮತ್ತು ಭಾನುವಾರ ರಜೆ ಇರುವ ಹಿನ್ನೆಲೆಯಲ್ಲಿ 4 ಕೋಟಿ ಮೊತ್ತದ ಚೆಕ್ ಅನ್ನು ಬಿಬಿಎಂಪಿಗೆ ಭದ್ರತೆಯಾಗಿ ನೀಡಬೇಕು. 4 ಕೋಟಿ ತೆರಿಗೆ ಹಣ ಬಿಬಿಎಂಪಿ ಖಾತೆಗೆ ವರ್ಗಾವಣೆಯಾದ ಬಳಿಕ ಚೆಕ್ ಅನ್ನು ಮರಳಿ ಪಡೆಯಬಹುದು” ಎಂದು ಪೀಠ ಆದೇಶ ಮಾಡಿದೆ.


“ಮಂತ್ರಿ ಮಾಲ್ ಆಡಳಿತ ಎಷ್ಟು ವರ್ಷಗಳಿಂದ ಎಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದೆ. ಬಾಕಿ ತೆರಿಗೆ ಪಾವತಿಗಾಗಿ ಬಿಬಿಎಂಪಿಗೆ ಮಂತ್ರಿಮಾಲ್ ನೀಡಿರುವ ವಿವರಣೆಯನ್ನು ಒಳಗೊಂಡ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಮಧ್ಯಂತರ ಆದೇಶ ರದ್ದುಪಡಿಸಲಾಗುವುದು” ಎಂದು ನ್ಯಾಯಾಲಯ ಎಚ್ಚರಿಸಿದೆ.


ಮಂತ್ರಿಮಾಲ್ ಆಡಳಿತ ಪ್ರತಿನಿಧಿಸಿದ್ದ ವಕೀಲ ಎಂ ಎಸ್ ಶ್ಯಾಮಸುಂದರ್ ಅವರು “ಮಾಲ್ಗೆ ಬೀಗ ಹಾಕುವ ಕುರಿತು ಬಿಬಿಎಂಪಿ ನಮಗೆ ಮುಂಚಿತವಾಗಿ ನೋಟಿಸ್ ನೀಡಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಲಾಗಿಲ್ಲ. ಮಾಲ್ಗೆ ಬೀಗ ಹಾಕಿರುವುದರಿಂದ ನೌಕಕರಿಗೆ ಸಮಸ್ಯೆಯಾಗಿದ್ದು, ಮಾಲ್ ನಲ್ಲಿರುವ ಒಂದೂವರೆ ಕೋಟಿ ರೂಪಾಯಿ ಮೊತ್ತದ ಕೆಲವು ವಸ್ತುಗಳು ಎರಡು ದಿನಗಳಲ್ಲೇ ಅನುಪಯೋಗವಾಗಲಿವೆ. ತಕ್ಷಣ ಒಂದು ಕೋಟಿ ರೂಪಾಯಿ ತೆರಿಗೆ ಹಣ ಪಾವತಿಸಲಾಗುವುದು. ಉಳಿದ ತೆರಿಗೆ ಮೊತ್ತವನ್ನು ಹಂತಹಂತವಾಗಿ ಪಾವತಿಸಲಾಗುವುದು. ಹೀಗಾಗಿ, ಇಂದೇ ಮಾಲ್ಗೆ ಹಾಕಿರುವ ಬೀಗ ತೆರೆಯಲು ಬಿಬಿಎಂಪಿಗೆ ಆದೇಶಿಸಬೇಕು” ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಬಿಬಿಎಂಪಿ ಪರ ವಕೀಲ ಬಿ ಎಸ್ ಕಾರ್ತಿಕೇಯನ್ ಅವರು “ಮಂತ್ರಿ ಮಾಲ್ ನಾಲ್ಕು ವರ್ಷಗಳಿಂದ 33 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದೆ. ಡಿಸೆಂಬರ್ 5ರಂದು ಎಲ್ಲಾ ತೆರಿಗೆ ಬಾಕಿಯನ್ನು ಪಾವತಿಸುವುದಾಗಿ ಮಂತ್ರಿ ಮಾಲ್ ಆಡಳಿತ ಮುಚ್ಚಳಿಕೆ ಬರೆದುಕೊಟ್ಟಿದೆ. ಈ ವಾಗ್ದಾನಕ್ಕೆ ತಕ್ಕಂತೆ ಅವರು ನಡೆದುಕೊಂಡಿಲ್ಲ. ಈಗ ಕೋವಿಡ್ ನೆಪ ಹೇಳುತ್ತಿರುವುದು ಸರಿಯಲ್ಲ” ಎಂದರು.

Join Whatsapp
Exit mobile version