Home ಟಾಪ್ ಸುದ್ದಿಗಳು ಭಾಷೆ, ಉಡುಪು ಮತ್ತು ಆಹಾರದ ಹೇರಿಕೆಯನ್ನು ಕನ್ನಡಿಗರಾದ ನಾವು ಸಹಿಸುವುದಿಲ್ಲ: ಅಮಿತ್ ಶಾ ಹೇಳಿಕೆಗೆ ಹೆಚ್...

ಭಾಷೆ, ಉಡುಪು ಮತ್ತು ಆಹಾರದ ಹೇರಿಕೆಯನ್ನು ಕನ್ನಡಿಗರಾದ ನಾವು ಸಹಿಸುವುದಿಲ್ಲ: ಅಮಿತ್ ಶಾ ಹೇಳಿಕೆಗೆ ಹೆಚ್ ಸಿ ಮಹದೇವಪ್ಪ ಚಾಟಿ

ಬೆಂಗಳೂರು: ಇಂಗ್ಲಿಷ್ ಭಾಷೆಗೆ ಹಿಂದಿ ಪರ್ಯಾಯವಾಗಬೇಕು, ಪ್ರಾದೇಶಿಕ ಭಾಷೆಯಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿಕೆ ಬೆನ್ನಲ್ಲೇ ರಾಜ್ಯಾದ್ಯಂತ ಆಕ್ರೋಶ ಬಿಗಿಯಾಗುತ್ತಿದೆ. ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಭಾಷೆ, ಉಡುಪು ಮತ್ತು ಆಹಾರದ ಹೇರಿಕೆಯನ್ನು ಕನ್ನಡಿಗರಾದ ನಾವು ಸಹಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸರಣಿ ಟ್ವೀಟ್’ಗಳ ಮೂಲಕ ಕಿಡಿಕಾರಿರುವ ಅವರು, ಭಾಷೆ, ಉಡುಪು ಮತ್ತು ಆಹಾರದ ಹೇರಿಕೆಯನ್ನು ಕನ್ನಡಿಗರಾದ ನಾವು ಸಹಿಸುವುದಿಲ್ಲ. ಈಗಾಗಲೇ ಹಿಂದಿ ಭಾಷೆಯ ಹೇರಿಕೆ ಚಾಲ್ತಿಯಲ್ಲಿದ್ದು ಅಮಿತ್ ಶಾ ಅವರ ಈ ಅಸಂವಿಧಾನಿಕ ನಡೆಯನ್ನು ನಾನು ಪೂರ್ಣವಾಗಿ ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.

ಭಾರತದ ಗ್ರಾಮೀಣ ಮಟ್ಟದಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯು ಅಸ್ತಿತ್ವದಲ್ಲಿದ್ದರೆ ನಗರಗಳ ಮಟ್ಟದಲ್ಲಿ ಹಿಂದಿಗಿಂತ ಇಂಗ್ಲಿಷ್ ಭಾಷೆಯು ಪ್ರಾದೇಶಿಕಭಾಷೆಗಳ ಜೊತೆಗೆ ಸಂಪರ್ಕ ಭಾಷೆಯಾಗಿ ಹೆಚ್ಚಾಗಿ ವ್ಯಾಪಿಸಿದೆ. ಈ ಸಂಗತಿ ತಿಳಿಯದೇ ಹಿಂದಿ ಭಾಷೆಯನ್ನು ಬಳಸಿ ಎಂದು ಅಮಿತ್ ಶಾ ಸೂಚಿಸಿರುವುದು ಅಸಂವಿಧಾನಿಕ ಮತ್ತು ಖಂಡನೀಯ ಎಂದಿದ್ದಾರೆ.

ಮತ್ತೊಂದು ಟ್ವೀಟ್’ನಲ್ಲಿ ಯಾವ ಭಾಷೆ ಮಾತನಾಡಬೇಕು ಎಂಬುದು ಸಂವಿಧಾನವು ನಮ್ಮ ದೇಶದ ಜನರಿಗೆ ನೀಡಿರುವ ಆಯ್ಕೆ. ಈಗ ಇಂಗ್ಲಿಷ್ ಭಾಷೆಯನ್ನು ಸಹಜವಾಗಿ ಬಳಸುವ ಹಾಗೆಯೇ ಇಂಗ್ಲಿಷ್ ಜಾಗದಲ್ಲಿ ಹಿಂದಿಯನ್ನೇ ಬಳಸುವ ಇಚ್ಛೆಯನ್ನು ಜನರು ವ್ಯಕ್ತಪಡಿಸಿದರೆ ಅದಕ್ಕೆ ಅವರು ಸಂಪೂರ್ಣ ಸ್ವತಂತ್ರರು ಎಂದು ಹೇಳಿದ್ದಾರೆ.

Join Whatsapp
Exit mobile version