Home ಟಾಪ್ ಸುದ್ದಿಗಳು ಮಲ್ಲತ್ತಹಳ್ಳಿ ಕೆರೆ ದಂಡೆಯಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪನೆ: ಸಚಿವ ಮುನಿರತ್ನ, ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್

ಮಲ್ಲತ್ತಹಳ್ಳಿ ಕೆರೆ ದಂಡೆಯಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪನೆ: ಸಚಿವ ಮುನಿರತ್ನ, ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಬೆಂಗಳೂರಿನ ಮಲ್ಲತ್ತಹಳ್ಳಿಯ ಕೆರೆಯ ದಂಡೆಯ ಮೇಲೆ 35 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಾಣ ಮಾಡಿರುವುದಕ್ಕೆ ಸಂಬಂಧಿಸಿದಂತೆ ತೋಟಗಾರಿಕಾ ಸಚಿವ ವಿ ಮುನಿತ್ನ ಸೇರಿದಂತೆ ಎಂಟು ಮಂದಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.


ಕೆರೆಗಳ ಒತ್ತುವರಿಗೆ ಆಕ್ಷೇಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಭಾಗವಾಗಿ ವಕೀಲ ಗೀತಾ ಮಿಶ್ರಾ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಬಿ ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.


ರಾಜರಾಜೇಶ್ವರಿ ನಗರ ಘಟಕದ ಬಿಜೆಪಿ ಅಧ್ಯಕ್ಷ ಎಂ ಗೋವಿಂದರಾಜು, ಬಿಬಿಎಂಪಿ ಜಂಟಿ ಆಯುಕ್ತ, ಎಂಜಿನಿಯರ್ಗಳಾದ ಗೀತಾ, ಬಸವರಾಜ್, ಶಿಲ್ಪಾ, ರಾಜ್ಯ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ ಮೃತ್ಯುಂಜಯ ಸ್ವಾಮಿ,, ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಸವರಾಜ್ ಆರ್ ಕಬಾಡೆ ಮತ್ತು ತೋಟಗಾರಿಕಾ ಸಚಿವ ಮುನಿರತ್ನಗೆ ನೋಟಿಸ್ ಜಾರಿ ಮಾಡಲಾಗಿದೆ.
ಮಹಾ ಶಿವರಾತ್ರಿಯ ಭಾಗವಾಗಿ ಫೆಬ್ರವರಿ 18ರಂದು ಶಿವನ ಮೂರ್ತಿ ಪ್ರತಿಷ್ಠಾಪಿಸಲು ಅಧಿಕಾರಿಗಳು ಅನುಮತಿಸಿದ್ದಾರೆ. ಪಕ್ಕದಲ್ಲಿ ಬಯಲು ರಂಗಸ್ಥಳ ನಿರ್ಮಿಸಲು ಮತ್ತು ಮನರಂಜನಾ ಚಟುವಟಿಕೆ ನಡೆಸಲು ಅನುಮತಿಸಲಾಗಿದೆ. ಹೈಕೋರ್ಟ್ ಆದೇಶದ ಅನ್ವಯ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯು (ನೀರಿ) ಮಲ್ಲತ್ತಹಳ್ಳಿ ಕೆರೆ ಸಮೀಕ್ಷೆ ನಡೆಸಿದ್ದು, ಕೆರೆಯು 73 ಎಕರೆಯಲ್ಲಿ ಹರಡಿಕೊಂಡಿದ್ದು, ಇದರಲ್ಲಿ 4.7 ಎಕರೆ ಒತ್ತುವರಿಯಾಗಿದೆ. ಅಕ್ರಮವಾಗಿ ಬಯಲು ರಂಗಸ್ಥಳ ನಿರ್ಮಿಸುವುದು ಮತ್ತು ಕಸ ಶೇಖರಣೆಯಿಂದಾಗಿ ಆ ಪ್ರದೇಶವು ಮತ್ತಷ್ಟು ಕಡಿಮೆಯಾಗಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
(ಕೃಪೆ: ಬಾರ್ & ಬೆಂಚ್)

Join Whatsapp
Exit mobile version