Home ಟಾಪ್ ಸುದ್ದಿಗಳು ನಾಯಿಯೊಂದಿಗೆ ಪಾರ್ಕಿಗೆ ಬರುವವರು ‘ಮಲ ಚೀಲ’ ತರಲು ಒತ್ತಾಯ| ಹೈಕೋರ್ಟಿನಿಂದ ಸರ್ಕಾರಕ್ಕೆ ನೋಟೀಸ್ ಜಾರಿ

ನಾಯಿಯೊಂದಿಗೆ ಪಾರ್ಕಿಗೆ ಬರುವವರು ‘ಮಲ ಚೀಲ’ ತರಲು ಒತ್ತಾಯ| ಹೈಕೋರ್ಟಿನಿಂದ ಸರ್ಕಾರಕ್ಕೆ ನೋಟೀಸ್ ಜಾರಿ

ಬೆಂಗಳೂರು: ಸಾರ್ವಜನಿಕ ಉದ್ಯಾನಗಳಿಗೆ ಸಾಕು ನಾಯಿಗಳ ಜೊತೆ ಬರುವ ಅವುಗಳ ಮಾಲೀಕರು ಮತ್ತು ರಕ್ಷಕರು ಅವುಗಳ ಜೊತೆಗೆ ಜೈವಿಕ ವಿಘಟನೀಯ ಮಲ ಚೀಲ (ಬಯೋಡಿಗ್ರೇಡೆಬಲ್ ಪೂಪ್ ಬ್ಯಾಗ್) ತರುವುದನ್ನು ಕಡ್ಡಾಯಗೊಳಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶನ ನೀಡಬೇಕು ಎಂದು ಕೋರಿದ್ದ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ಪ್ರಾಣಿಗಳ ಹಕ್ಕುಗಳನ್ನು ಪ್ರತಿಪಾದಿಸುವ ಸರ್ಕಾರೇತರ ಸಂಸ್ಥೆ ಕಂಪ್ಯಾಷನ್ ಅನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯುಪಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ನಡೆಸಿತು.

ಅರ್ಜಿದಾರರ ಪರ ವಕೀಲ ಅಲ್ವಿನ್‌ ಸೆಬಾಸ್ಟಿಯನ್‌, “ಸಾರ್ವಜನಿಕ ಸ್ಥಳ ಅಥವಾ ಉದ್ಯಾನ ಪ್ರವೇಶಿಸುವ ಸಂಬಂಧ ಕಡ್ಡಾಯವಾದ ಪೂರ್ವಷರತ್ತುಗಳು ಅಥವಾ ದಂಡ ವಿಧಿಸಲು ನಿರ್ದಿಷ್ಟ ನಿಯಮ ಇಲ್ಲದಿರುವುದರಿಂದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಲಾಗುತ್ತಿಲ್ಲ” ಎಂದರು. ವಾದ ಆಲಿಸಿದ ಪೀಠವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ನವೆಂಬರ್‌ 8ಕ್ಕೆ ಮುಂದೂಡಿತು.

“ಸಾರ್ವಜನಿಕ ಉದ್ಯಾನಗಳಲ್ಲಿ ಅನೇಕರು ತಮ್ಮ ಸಾಕು ಪ್ರಾಣಿಗಳನ್ನು ವಿಶೇಷವಾಗಿ ನಾಯಿಗಳನ್ನು ಕರೆದುಕೊಂಡು ಬರುತ್ತಾರೆ. ಅವುಗಳು ಅಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವುದರಿಂದ ಪಾರ್ಕ್‌ಗೆ ವಾಯು ವಿಹಾರಕ್ಕೆಂದು ಬರುವ ಇತರ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ನಾಯಿಗಳಿಗೂ ವಾಯುವಿಹಾರದ ಅವಶ್ಯಕತೆ ಇರುತ್ತದೆ. ಅದೇ ರೀತಿ ಪಾರ್ಕ್‌ಗೆ ಬರುವ ಎಲ್ಲರಿಗೂ ಸ್ವಚ್ಛ ವಾತಾವರಣ ಕಲ್ಪಿಸುವ ಜವಾಬ್ದಾರಿ ಪಾಲಿಕೆ ಮೇಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ನಾಯಿಗಳ ಜೊತೆಗೆ ಬರುವ ಅವುಗಳ ಮಾಲೀಕರು ಮತ್ತು ಪೋಷಕರು ತಮ್ಮ ಜೊತೆಗೆ ಸಾಕು ಪ್ರಾಣಿಗಳ ಶೌಚವನ್ನು ಸಂಗ್ರಹಿಸುವ ‘ಬಯೋಡಿಗ್ರೇಡೆಬಲ್ ಪೂಪ್ ಬ್ಯಾಗ್’ ಹಾಗೂ ಇತರ ವಸ್ತುಗಳನ್ನು ತಮ್ಮ ಜೊತೆ ತರುವುದನ್ನು ಕಡ್ಡಾಯಗೊಳಿಸಬೇಕು” ಎಂದು ಮನವಿ ಮಾಡಲಾಗಿದೆ.

“ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡಿದರೆ ದಂಡ ಹಾಕುವ ಅಧಿಕಾರ ಬಿಬಿಎಂಪಿಗೆ ಇದೆ. ಅದೇ ರೀತಿ ಸಾಕು ಪ್ರಾಣಿಗಳು ಸಾರ್ವಜನಿಕ ಸ್ಥಳದಲ್ಲಿ ಮಾಡುವ ಮಲ-ಮೂತ್ರವನ್ನು ಶುದ್ಧೀಕರಿಸದ ಅವುಗಳ ಮಾಲೀಕರಿಗೆ ದಂಡ ಹಾಕಬೇಕು. ಸಾಕು-ಪ್ರಾಣಿಗಳ ಮಲವನ್ನು ಬಯೋಡಿಗ್ರೇಡೆಬಲ್‌ ಚೀಲಗಳಲ್ಲಿ ವಿಲೇವಾರಿ ಮಾಡಲು ತೊಟ್ಟಿಗಳನ್ನು ಉದ್ಯಾನಗಳಲ್ಲಿ ಹಾಕಬೇಕು. ಅವುಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಬೇಕು” ಎಂದು ಮನವಿ ಮಾಡಲಾಗಿದೆ.

ನಾಯಿಗಳ ಕೊರಳಿಗೆ ಹಗ್ಗ ಹಾಕಿ ಅವುಗಳ ಮಾಲೀಕರು ಇಲ್ಲವೇ ಪೋಷಕರು ‘ಬಯೋಡಿಗ್ರೇಡಬಲ್ ಪೂಪ್ ಬ್ಯಾಗ್’ಗಳನ್ನು ತಮ್ಮ ಜೊತೆಗೆ ತಂದರೆ ಮಾತ್ರ ನಾಯಿಗಳಿಗೆ ಪಾರ್ಕ್‌ಗಳಿಗೆ ಪ್ರವೇಶಕ್ಕೆ ಅನುಮತಿ ನೀಡಲು ಪಾಲಿಕೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Join Whatsapp
Exit mobile version