Home ಟಾಪ್ ಸುದ್ದಿಗಳು ಹೈಕೋರ್ಟ್ ಹಿಜಾಬ್ ವಿಚಾರಣೆ: ವಾದ ಪ್ರತಿವಾದ ಹೀಗಿದೆ…

ಹೈಕೋರ್ಟ್ ಹಿಜಾಬ್ ವಿಚಾರಣೆ: ವಾದ ಪ್ರತಿವಾದ ಹೀಗಿದೆ…

ಬೆಂಗಳೂರು: ಹಿಜಾಬ್ ಧರಿಸಿ ಕಾಲೇಜಿಗೆ ತೆರಳುವುದಕ್ಕೆ ಸಂಬಂಧಿಸಿದಂತೆ ಮುಸ್ಲಿಮ್ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಸೋಮವಾರ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ಪೂರ್ಣ ಪೀಠವು ಮುಂದುವರಿಸಿತು.


ಸಿಜೆ ಅವಸ್ಥಿ : ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳೋಣ. ವಿಶೇಷವಾಗಿ ಮಾಧ್ಯಮಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ವಿನಂತಿ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ.
ಸಿಜೆ ಅವಸ್ಥಿ: ನಾವು ಯಾರ ವಿರುದ್ಧವೂ ಇಲ್ಲ. ಜವಾಬ್ದಾರಿಯಿಂದ ನಡೆದುಕೊಳ್ಳಿ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವಂತೆ ಮಾಡಬೇಕು.


ವಕೀಲ ಸುಭಾಷ್ ಝಾ: ಪಕ್ಷಕಾರರು ಕಾನೂನು ವಿಚಾರಗಳಿಗೆ ಸೀಮಿತವಾಗಬೇಕು. ಯಾವುದಕ್ಕೂ ಕೋಮು ಬಣ್ಣ ನೀಡಬಾರದು.
ವಕೀಲ ದೇವದತ್ ಕಾಮತ್ : ಸರ್ಕಾರದ ಆದೇಶವು ಸಂವಿಧಾನದ 25ನೇ ವಿಧಿಗೆ ವಿರುದ್ಧವಾಗಿದ್ದು, ಗಮನವಹಿಸಿ ನೀಡಿರುವುದಾಗಿಲ್ಲ.
ವಕೀಲ ಕಾಮತ್ : ಸರ್ಕಾರದ ಆದೇಶದಲ್ಲಿ ಎರಡು ವಿಚಾರಗಳನ್ನು ಉಲ್ಲೇಖಿಸಲಾಗಿದೆ.

  1. ಸಂಬಿಧಾನದ 25ನೇ ವಿಧಿ ಅಡಿ ಹಿಜಾಬ್ ಧರಿಸುವುದಕ್ಕೆ ರಕ್ಷಣೆ ಇಲ್ಲ.
  2. ಹಿಜಾಬ್ ಧರಿಸುವುದಕ್ಕೆ ವಿನಾಯಿತಿ ನೀಡುವ ವಿಚಾರವನ್ನು ಸರ್ಕಾರವು ಕಾಲೇಜು ಅಭಿವೃದ್ಧಿ ಸಮಿತಿಗೆ ನಿರ್ಧರಿಸಲು ಬಿಟ್ಟಿದೆ
    ವಕೀಲ ಕಾಮತ್ : ಮೊದಲನೇ ವಿಚಾರ ಸಂಪೂರ್ಣವಾಗಿ ತಪ್ಪು. ಹಿಜಾಬ್ ಧರಿಸುವ ನಿರ್ಧರಿಸುವ ವಿಚಾರವನ್ನು ಕಾಲೇಜು ಅಭಿವೃದ್ಧಿ ಸಮಿತಿಗೆ ಬಿಡುವುದು ಸಂಪೂರ್ಣವಾಗಿ ಕಾನೂನುಬಾಹಿರ. ಸಾರ್ವಜನಿಕ ಸುವ್ಯವಸ್ಥೆಯು ರಾಜ್ಯ ಸರ್ಕಾರದ ಜವಾಬ್ದಾರಿ.
    ವಕೀಲ ಕಾಮತ್ : ಸರ್ಕಾರದ ಆದೇಶದ ಪ್ರಕಾರ ಶಾಸಕರು ಇರುವ ಸಮಿತಿಯು ಮೂಲಭೂತ ಹಕ್ಕಿನ ಚಲಾವಣೆಯನ್ನು ನಿರ್ಧರಿಸುತ್ತದೆ. ಇದಕ್ಕೆ ಯಾವುದೇ ಅನುಮತಿ ಇಲ್ಲ.
    ಸಿಜೆ ಅವಸ್ಥಿ: ಸಂವಿಧಾನದ 25ನೇ ವಿಧಿಯು ಪ್ರಶ್ನಾತೀತವೇ ಅಥವಾ ನಿರ್ಬಂಧಗಳಿಗೆ ಒಳಪಟ್ಟಿದೆಯೇ ಎಂಬುದು ಪ್ರಶ್ನೆ.

ವಕೀಲ ಕಾಮತ್ : 25ನೇ ವಿಧಿಯು 19ನೇ ವಿಧಿಯ ರೀತಿಯಲ್ಲಿ ಸಾಮಾನ್ಯ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯದ ಸಂದರ್ಭದ ವಿಚಾರಗಳನ್ನು ಉಲ್ಲೇಖಿಸಿ ನಿರ್ಬಂಧಿಸಬಹುದು ಎಂದು 25ನೇ ವಿಧಿಯಲ್ಲೇ ಹೇಳಲಾಗಿದೆ.
ಸಿಜೆ ಅವಸ್ಥಿ: ಸಾರ್ವಜನಿಕ ಸುವ್ಯವಸ್ಥೆ ಎಂದರೇನು?
ವಕೀಲ ಕಾಮತ್ : ದಾರಿಯಲ್ಲಿ ನಾನು ನಡೆದು ಹೋಗುತ್ತಿರುವಾಗ ಕೆಲವರು ನನ್ನನ್ನು ಸುತ್ತುವರಿದರು ಎಂದು ಸಾರ್ವಜನಿಕ ಸುವ್ಯವಸ್ಥೆಗೆ ಸಮಸ್ಯೆಯಾಗುತ್ತದೆ ಎಂದು ಸರ್ಕಾರವು ಓಡಾಡುವುದನ್ನು ನಿರ್ಬಂಧಿಸಲಾಗದು.
ಸಿಜೆ ಅವಸ್ಥಿ: ಆದೇಶದ ಮೂಲಕ ರಾಜ್ಯ ಸರ್ಕಾರವು ೨೫ನೇ ವಿಧಿಯನ್ನು ನಿರ್ಬಂಧಿಸಿದೆಯೇ ಅಥವಾ ಇಲ್ಲವೋ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.
ವಕೀಲ ಕಾಮತ್ : ಜನರು ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುವುದನ್ನು ಖಾತರಿಪಡಿಸುವ ಕರ್ತವ್ಯವನ್ನು ಸರ್ಕಾರ ನಿಭಾಯಿಸಬೇಕು. ಒಂದು ವರ್ಗವು ಮತ್ತೊಂದು ವರ್ಗದ ಜನರು ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಬಿಡದಿರುವುದು ಮೂಲಭೂತ ಹಕ್ಕಿನ ನಿರ್ಬಂಧಕ್ಕೆ ಆಧಾರವಾಗಲಾರದು.
ಸಿಜೆ ಅವಸ್ಥಿ: ಆಕ್ಷೇಪಿತ ಸರ್ಕಾರದ ಆದೇಶದಲ್ಲಿ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ವಿಧಿಸಲಾಗಿದೆಯೇ?

ಸಿಜೆ ಅವಸ್ಥಿ: ಕೆಲವು ಹೈಕೋರ್ಟ್‌ಗಳ ಆದೇಶಗಳನ್ನು ಆಧರಿಸಿ ಸರ್ಕಾರ ಆದೇಶ ಮಾಡಿದೆ. ಸರ್ಕಾರವು ಹಕ್ಕಿನ ಉಲ್ಲಂಘನೆಯಲ್ಲ ಎಂದು ಭಾವಿಸಿಕೊಂಡಿದೆ.

ವಕೀಲ ಕಾಮತ್‌ : ಸರ್ಕಾರ ತಪ್ಪಾಗಿ ಅರ್ಥೈಸಿಕೊಂಡಿದೆ. ಇದನ್ನು ನಾನು ಪ್ರಶ್ನಿಸಿದ್ದೇನೆ.

ಸಿಜೆ ಅವಸ್ಥಿ: ಆ ವಿಚಾರಕ್ಕೆ ಬರುವುದಕ್ಕೂ ಮುನ್ನ 25ನೇ ವಿಧಿಯ ಬಗ್ಗೆ ತಿಳಿದುಕೊಳ್ಳೋಣ.

ವಕೀಲ ಕಾಮತ್‌ : ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಮತ್ತು ನೈತಿಕತೆಯ ಹೊರತಾಗಿ, ಧಾರ್ಮಿಕ ಆಚರಣೆಯೊಂದಿಗೆ ಸಂಬಂಧ ಹೊಂದಿರುವ ಯಾವುದೇ ಆರ್ಥಿಕ, ಹಣಕಾಸು, ರಾಜಕೀಯ ಅಥವಾ ಇತರ ಜಾತ್ಯತೀತ ಚಟುವಟಿಕೆಗಳನ್ನು ನಿರ್ಬಂಧಿಸುವ ಕಾನೂನನ್ನು ರಾಜ್ಯ ಸರ್ಕಾರ ಮಾಡಬಹುದು.

ವಕೀಲ ಕಾಮತ್‌ : ಸರ್ಕಾರವು ತನ್ನ ಆದೇಶದಲ್ಲಿ ಉಲ್ಲೇಖಿಸಿರುವ ಕೇರಳ ಹೈಕೋರ್ಟ್‌ ತೀರ್ಪಿನ ವಿವರಣೆ. ಇದರಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಿಜಾಬ್‌ ಧರಿಸಿರುವ ವಿದ್ಯಾರ್ಥಿಗೆ ಅನುಮತಿಸಬಹುದೇ ಎಂಬುದಕ್ಕೆ ಸಂಬಂಧಿಸಿದ್ದಾಗಿತ್ತು.

ವಕೀಲ ಕಾಮತ್‌ : ಹಿಂದೂ ಸಮುದಾಯಕ್ಕೆ ಸೇರಿದ್ದೂ ನಾನು ಈ ರೀತಿ ವಾದ ಮಾಡುವುದು ಹೇಗೆ ಎಂದು ಮಾಧ್ಯಮದಲ್ಲಿ ಚರ್ಚಿಸಲಾಗುತ್ತಿದೆ. ವಕೀಲನಾಗಿ ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಹೀಗಾಗಿ, ಮಾಧ್ಯಮಗಳು ಜವಾಬ್ದಾರಿಯಿಂದ ಇರಬೇಕು ಎಂಬ ನಿಮ್ಮ ಮಾತಿಗೆ ನಾನು ಸಹಮತ ವ್ಯಕ್ತಪಡಿಸುತ್ತೇನೆ.

ವಕೀಲ ಕಾಮತ್‌ : ವ್ಯಕ್ತಿಯೊಬ್ಬರು ತಮ್ಮ ನಂಬಿಕೆಯು ತನ್ನ ಆಚರಣೆ ಅತ್ಯಗತ್ಯ ಎಂದು ಭಾವಿಸಿದರೆ ಮತ್ತು ಆಚರಣೆಯು ಯಾರ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದಿಲ್ಲ ಎಂದು ಭಾವಿಸಿದರೆ, ಆ ಸಂದರ್ಭದಲ್ಲಿ, ಮೂಲ ಧಾರ್ಮಿಕ ಆಚರಣೆಯ ಪರೀಕ್ಷೆಯು ಉದ್ಭವಿಸುವುದಿಲ್ಲ.

ಸಿಜೆ ಅವಸ್ಥಿ: ಈ ವಿದ್ಯಾರ್ಥಿಗಳು ತಲೆಗೆ ಸ್ಕಾರ್ಫ್ ಧರಿಸಿ ಸಾಕಷ್ಟು ಸಮಯದಿಂದ ಅಭ್ಯಾಸ ಮಾಡುತ್ತಿದ್ದಾರೆ ಎಂಬುದು ನಿಮ್ಮ ಪ್ರಕರಣವೇ?

ವಕೀಲ ಕಾಮತ್‌ : ನಿಮ್ಮ ಪ್ರಶ್ನೆಗೆ ಆಭಾರಿಯಾಗಿದ್ದೇನೆ. ಕಾಲೇಜಿಗೆ ಪ್ರವೇಶ ಪಡೆದಾಗಿನಿಂದಲೂ ನಾವು ಹಿಜಾಬ್‌ ಧರಿಸುತ್ತಿದ್ದೇವೆ ಎಂಬುದು ನನ್ನ ಪ್ರಕರಣ. ಇದನ್ನು ನಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದೇವೆ.

  ವಕೀಲ ಕಾಮತ್‌ : ಸಮವಸ್ತ್ರಕ್ಕೆ ಪೂರಕವಾದ ಹಿಜಾಬ್‌ ಅನ್ನೇ ವಿದ್ಯಾರ್ಥಿನಿಯರು ಧರಿಸುತ್ತಿದ್ದಾರೆ. ಬೇರೊಂದು ಬಣ್ಣದ ಸ್ಕಾರ್ಫ್‌ ಧರಿಸುತ್ತೇವೆ ಎಂಬುದು ನಮ್ಮ ಪ್ರಕರಣವಲ್ಲ. ಸಮವಸ್ತ್ರದ ಬಣ್ಣದ ಸ್ಕಾರ್ಫ್‌ ಹಾಕಬೇಕು ಎಂಬುದು ನಮ್ಮ ಪ್ರಕರಣ.

ವಕೀಲ ಕಾಮತ್‌ : ಸಮವಸ್ತ್ರದ ಬಣ್ಣದ ಸ್ಕಾರ್ಫ್‌ ಧರಿಸಲು ಅಧಿಸೂಚನೆಯ ಮೂಲಕ ಕೇಂದ್ರೀಯ ವಿದ್ಯಾಲಯಗಳು ಮುಸ್ಲಿಮ್‌ ವಿದ್ಯಾರ್ಥಿಗಳಿಗೆ ಇವತ್ತಿಗೂ ಅವಕಾಶ ಮಾಡಿಕೊಟ್ಟಿವೆ.

ವಕೀಲ ಕಾಮತ್‌ : ಅಜ್ಮಲ್‌ ಖಾನ್‌ ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್‌ ಪ್ರಕಟಿಸಿರುವ ತೀರ್ಪಿನಲ್ಲಿ ಪರ್ದಾ ಅಗತ್ಯವಲ್ಲ. ಆದರೆ, ಹಿಜಾಬ್‌ ಅಗತ್ಯ ಎಂದು ಹೇಳಲಾಗಿದೆ. ಈ ತೀರ್ಪಿನಲ್ಲಿ ಮಲೇಷ್ಯಾ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ತೀಪುಗಳನ್ನು ಉಲ್ಲೇಖಿಸಲಾಗಿದೆ.

  ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌: ಮಲೇಷ್ಯಾ ಜಾತ್ಯತೀತ ದೇಶವೇ ಅಥವಾ ಧಾರ್ಮಿಕ ರಾಷ್ಟ್ರವೇ?

ವಕೀಲ ಕಾಮತ್‌ : ಮಲೇಷ್ಯಾ ಖಂಡಿತವಾಗಿಯೂ ಧಾರ್ಮಿಕ ದೇಶ.

ವಕೀಲ ಕಾಮತ್‌ : ಫಾತಿಮಾ ತಸ್ನೀಮ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಕೇರಳ ಹೈಕೋರ್ಟ್‌ ನೀಡಿರುವ ತೀರ್ಪಿನ ಉಲ್ಲೇಖ. ಈ ತೀರ್ಪು ಕ್ರೈಸ್ತ ಸಮುದಾಯದ ಅಲ್ಪಸಂಖ್ಯಾತ ಸಂಸ್ಥೆಗೆ ಸೀಮಿತವಾಗಿತ್ತು.

  ವಕೀಲ ಕಾಮತ್‌ : ಖಾಸಗಿ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸ್ಟ್ಯಾಂಡರ್ಡ್‌ ರೂಪಿಸುವ ಸ್ವಾತಂತ್ರ್ಯವಿರುವ ಹಿನ್ನೆಲೆಯಲ್ಲಿ ಅದು ಸಂಪೂರ್ಣವಾಗಿ ಸರಿಯಾದ ತೀರ್ಪಾಗಿದೆ.

ನ್ಯಾ. ದೀಕ್ಷಿತ್‌: ಮಲೇಷ್ಯಾ ಹೊರತುಪಡಿಸಿ ಯಾವುದೇ ಇತರ ಇಸ್ಲಾಮಿಕ್ ದೇಶದ ನ್ಯಾಯಾಲಯವು ಇಸ್ಲಾಂ ಧರ್ಮಕ್ಕೆ ಅಗತ್ಯವಾದ ಹಿಜಾಬ್‌ನ ವಿರುದ್ಧ ವ್ಯತಿರಿಕ್ತ ದೃಷ್ಟಿಕೋನ ಹೊಂದಿದ್ದಾವೆಯೇ?

ವಕೀಲ ಕಾಮತ್‌ : ನನಗೆ ತಿಳಿದಿಲ್ಲ. ಆದರೆ, ನಾನು ಜ್ಞಾನದ ಭಂಡಾರ ಅಲ್ಲ. ಆದರೆ ನನ್ನ ಸಂಶೋಧನೆಯ ಪ್ರಕಾರ, ಇದು ಇಸ್ಲಾಮಿನ ಅತ್ಯಗತ್ಯ ಆಚರಣೆಯಲ್ಲ ಎಂದು ಹೇಳುವ ಯಾವುದೇ ಅಧಿಕೃತ ಘೋಷಣೆ ಇಲ್ಲ.

ವಕೀಲ ಕಾಮತ್‌ : ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಉಲ್ಲೇಖಿಸಿರುವ ಬಾಂಬೆ ಹೈಕೋರ್ಟ್‌ನ ತೀರ್ಪು ಎಲ್ಲಾ ಬಾಲಕಿಯರ ವಿಭಾಗಕ್ಕೆ ಅನ್ವಯವಾಗುವುದರಿಂದ ಇದು ರಾಜ್ಯ ಸರ್ಕಾರಕ್ಕೆ ಅನ್ವಯಿಸದು.

ವಕೀಲ ಕಾಮತ್‌ : ಮದ್ರಾಸ್‌ ಹೈಕೋರ್ಟ್‌ ತೀರ್ಪಿನಲ್ಲಿ 25ನೇ ವಿಧಿಯ ಅಥವಾ ಹಿಜಾಬ್‌ ಬಗ್ಗೆ ಒಂದೇ ಒಂದು ಪದ ಮಾತನಾಡಿಲ್ಲ. ಇದು ಶಿಕ್ಷಕರ ಸಮವಸ್ತ್ರಕ್ಕೆ ಸಂಬಂಧಿಸಿದ್ದಾಗಿತ್ತು. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ ಎಂಬುದಾಗಿತ್ತು. ಈ ತೀರ್ಪುಗಳ ಮೇಲಿನ ಸರ್ಕಾರದ ಆದೇಶವು ಸಂಪೂರ್ಣ ತಪ್ಪು.

  ವಕೀಲ ಕಾಮತ್‌: ಅಗತ್ಯ ಆಚರಣೆಗಳನ್ನು ಆಹಾರ ಮತ್ತು ಉಡುಪಿಗೆ ಹೇಗೆ ವಿಸ್ತರಿಸಬಹುದು ಎಂಬುದರ ವಿವರಣೆ. 1954ರಲ್ಲಿ ಶಿರೂರ ಮಠ ಪ್ರಕರಣದಲ್ಲಿ  ಅದನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ವಕೀಲ ಕಾಮತ್‌ : ಹಿಜಾಬ್‌ ಧರಿಸುವುದು ಪ್ರತಿಗಾಮಿ ಎಂದು ನಾನು ವೈಯಕ್ತಿಕವಾಗಿ ಭಾವಿಸಬಹುದು. ಆದರೆ, ಇದನ್ನು ನಂಬುವವರ ದೃಷ್ಟಿಕೋನದಿಂದ ನೋಡಬೇಕು. ಬಿಜೋ ಇಮ್ಯಾನುಯಲ್‌ ಪ್ರಕರಣದ ಉಲ್ಲೇಖ. ಪ್ರಸ್ತುತ ಪ್ರಕರಣವು ರಾಷ್ಟ್ರಗೀತೆಯಲ್ಲಿನ ತೀರ್ಪಿನಿಂದ ಸಂಪೂರ್ಣವಾಗಿ ಆವರಿಸಲ್ಪಟ್ಟಿದೆ. ಬಿಜೋ ಇಮ್ಯಾನುಯಲ್‌ ಪ್ರಕರಣ ಆಧರಿಸಿ, ಪ್ರಸ್ತುತ ಪ್ರಕರಣದಲ್ಲಿ ವಿದ್ಯಾರ್ಥಿಗಳು ಹಲವು ವರ್ಷಗಳಿಂದ ಹಿಜಾಬ್‌ ಧರಿಸುತ್ತಿದ್ದಾರೆ.

ವಕೀಲ ಕಾಮತ್‌ :  ಕಾಲೇಜು ಅಭಿವೃದ್ಧಿ ಸಮಿತಿಗೆ ಯಾವುದೇ ಶಾಸನಬದ್ಧ ಆಧಾರವಿಲ್ಲ. ಸುತ್ತೋಲೆ ಆಧರಿಸಿ ಸಿಡಬ್ಲುಸಿ ರಚಿಸಲಾಗಿದೆ. ಸಾರ್ವಜನಿಕ ಸುವ್ಯವಸ್ಥೆಯನ್ನು ನಿರ್ಬಂಧಿಸುವುದನ್ನು ದಾಟಲಾಗದ ಆದೇಶದಲ್ಲಿ ಇದು ಅಡಕಗೊಂಡಿದೆ. ಅಂತಹ ಕ್ರಮಗಳನ್ನು ಸೂಚಿಸುವ ಸಾಮಾಜಿಕ ಕಲ್ಯಾಣ ಮತ್ತು ಸುಧಾರಣೆಗೆ ಯಾವುದೇ ಕಾನೂನು ಇಲ್ಲ.

25(2)ನೇ ವಿಧಿಯ ವಿನಾಯಿತಿಗೆ ಸಂಬಂಧಿಸಿದಂತೆ, ಕಾಲೇಜು ಅಭಿವೃದ್ಧಿ ಸಮಿತಿಯು ಯಾವುದೇ ಶಾಸನಬದ್ಧ ಆಧಾರವನ್ನು ಹೊಂದಿಲ್ಲ. ಸಾಮಾಜಿಕ ಕಲ್ಯಾಣಕ್ಕಾಗಿ ಧಾರ್ಮಿಕ ಆಚರಣೆಯೊಂದಿಗೆ ಸಂಬಂಧಿಸಬಹುದಾದ ಯಾವುದೇ ಆರ್ಥಿಕ, ರಾಜಕೀಯ ಅಥವಾ ಇತರ ಜಾತ್ಯತೀತ ಚಟುವಟಿಕೆಯನ್ನು ನಿಯಂತ್ರಿಸುವ ಅಧಿಕಾರವನ್ನು ರಾಜ್ಯ ಹೊಂದಿದೆ.

ನ್ಯಾ. ದೀಕ್ಷಿತ್‌: ಅಗತ್ಯ ಧಾರ್ಮಿಕ ಆಚರಣೆಯೂ? ಅಗತ್ಯವಾದ ಧಾರ್ಮಿಕ ಆಚರಣೆಯು ಸಂಪೂರ್ಣ ಅಥವಾ ಕಾನೂನಿನ ಮೂಲಕ ನಿಯಂತ್ರಣಕ್ಕೆ ಒಳಗಾಗುತ್ತದೆಯೇ?

ವಕೀಲ ಕಾಮತ್‌ : 25(2) ನೇ ವಿಧಿಯು ಧಾರ್ಮಿಕ ಆಚರಣೆ, ಆರ್ಥಿಕ, ಹಣಕಾಸು, ರಾಜಕೀಯ ಅಥವಾ ಇತರ ಜಾತ್ಯತೀತ ಚಟುವಟಿಕೆಗಳನ್ನು ನಿಯಂತ್ರಿಸಲು ಅನುಮತಿಸುತ್ತದೆ. ಆದರೆ, ಪ್ರಮುಖ ಧಾರ್ಮಿಕ ಆಚರಣೆಯನ್ನಲ್ಲ.

ವಕೀಲ ಕಾಮತ್‌ : ಹೀಗಾಗಿ, ಮೂಲ ಧಾರ್ಮಿಕ ಆಚರಣೆಯು ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಮತ್ತು ನೈತಿಕತೆಗೆ ಸಮಸ್ಯೆಯಾದರೆ ಆಗ ಅವುಗಳನ್ನು ಸರ್ಕಾರ ನಿರ್ಬಂಧಿಸಬಹುದು. ಮೂರು ನಿರ್ಬಂಧಗಳಿಗೆ ಸುಪ್ರೀಂ ಕೋರ್ಟ್‌ ಅನುಮತಿಸಿದೆ.

* ಸಾರ್ವಜನಿಕ ಆದೇಶ, ನೈತಿಕತೆ ಮತ್ತು ಆರೋಗ್ಯ.

* ವಿಭಾಗ -III ಯ ಇತರೆ ನಿಬಂಧನೆಗಳು

* ಸಂವಿಧಾನದ 25(2).

ವಕೀಲ ಕಾಮತ್‌ : ಬಿಜೋ ಇಮ್ಯಾನುಯಲ್‌ ಪ್ರಕರಣದಲ್ಲಿ ರಾಷ್ಟ್ರಗೀತೆ ಹಾಡಲಿಲ್ಲ ಎಂದು ಮಕ್ಕಳನ್ನು ಹೊರಹಾಕಿದ್ದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Join Whatsapp
Exit mobile version