Home ಟಾಪ್ ಸುದ್ದಿಗಳು ಹಾಸನ| ಕಾಡಾನೆ ದಾಳಿ: ಮಹಿಳೆಗೆ ತೀವ್ರ ಗಾಯ

ಹಾಸನ| ಕಾಡಾನೆ ದಾಳಿ: ಮಹಿಳೆಗೆ ತೀವ್ರ ಗಾಯ

ಸಕಲೇಶಪುರ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಕಾಡಾನೆ ತುಳಿದು ಕೊಂಡ ಘಟನೆ ಮಾಸುವ  ಮುನ್ನವೇ ಬಾಳ್ಳುಪೇಟೆ ಸಮೀಪ ಮಹಿಳೆ ಮೇಲೆ ಇಂದು ಮತ್ತೊಮ್ಮೆ ಕಾಡಾನೆ ದಾಳಿ ನಡೆಸಿದ್ದು, ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ.

ಬಾಳ್ಳುಪೇಟೆ- ಬಾಗೆ ಸಮೀಪದ ಅನಿಲ್ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರಂಗಮ್ಮ ಎಂಬಾಕೆಯ ಮೇಲೆ ಇಂದು ಬೆಳಗ್ಗೆ ಒಂಟಿ ಸಲಗ ದಾಳಿ ಮಾಡಿದೆ. ಆಕೆಯನ್ನು ಎತ್ತಿ ಎಸೆದ ರಭಸಕ್ಕೆ ಮಹಿಳೆಯ ಕಾಲು ಮುರಿದಿದ್ದು, ತೀವ್ರವಾಗಿ ಗಾಯಗೊಂಡ ರಂಗಮ್ಮ ಅವರನ್ನು ಕೂಡಲೇ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಕಾರ್ಮಿಕರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಾ ಪ್ರಾಣ ಹಾನಿ ನಡೆಸುತ್ತಿದ್ದು ರಂಗಮ್ಮ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಇತ್ತೀಚೆಗೆ ಬಿಕ್ಕೋಡು ಸಮೀಪ ಸಲ್ಡಾನಾ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರನ್ನು ಕಾಡಾನೆ ಬಲಿ ತೆಗೆದುಕೊಂಡಿತ್ತು. ಮಂಗಳವಾರವಷ್ಟೇ ತಾಲೂಕಿನ ಬಾಳ್ಳುಪೇಟೆ ಸಮೀಪ ಕಾರ್ಮಿಕ ರವಿ ಅವರನ್ನು ಕಾಡಾನೆ ಬಲಿ ಪಡೆದಿತ್ತು. ಒಂದೆಡೆ ಕಾಡಾನೆ ಹಾವಳಿ ತಪ್ಪಿಸಲು ಸರ್ಕಾರ ಎರಡು ಮೂರು ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸುತ್ತಿದ್ದರೆ ಮತ್ತೊಂದೆಡೆ ಕಾಡಾನೆ ಉಪಟಳ ಎರಡು ಮೂರು ಪಟ್ಟು   ಹೆಚ್ಚುತ್ತಿದೆ. ಇದರಿಂದ  ಅಪಾರ ಪ್ರಮಾಣದ ಬೆಳೆ ಹಾನಿ ಜೊತೆಗೆ ಪ್ರಾಣ ಹಾನಿ ಸಂಭವಿಸುತ್ತಿದ್ದು ಸರ್ಕಾರ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲವಾಗಿದೆ.

Join Whatsapp
Exit mobile version