Home ಟಾಪ್ ಸುದ್ದಿಗಳು ಹಾಸನ: ಜಿಲ್ಲೆಯಲ್ಲಿ ತೀವ್ರ ಮಳೆ; 421 ಮನೆಗಳಿಗೆ ಹಾನಿ; 224 ಹೆಕ್ಟೇರ್ ಬೆಳೆ ನಾಶ

ಹಾಸನ: ಜಿಲ್ಲೆಯಲ್ಲಿ ತೀವ್ರ ಮಳೆ; 421 ಮನೆಗಳಿಗೆ ಹಾನಿ; 224 ಹೆಕ್ಟೇರ್ ಬೆಳೆ ನಾಶ

ಹಾಸನ: ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಮತ್ತು ಅದಕ್ಕೂ ಮುನ್ನ ಸುರಿದ ನಿರಂತರ ಮಳೆಗೆ ಇಲ್ಲಿಯವರೆಗೂ ಒಟ್ಟು 421 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣನ ಆರ್ಭಟಕ್ಕೆ ಹಲವು ರೀತಿಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಜು.10 ರಿಂದ ಜು.16 ರವರೆಗೆ ವಾಡಿಕೆ ಮಳೆ 56 ಮಿಮೀ ಆಗಬೇಕಿತ್ತು. ಆದರೆ 170 ಮಿಮೀ ಅಂದರೆ ಶೇ.202 ರಷ್ಟು ಹೆಚ್ಚಿನ ಪ್ರಮಾಣದ ಮಳೆಯಾಗಿದೆ ಎಂದು ಹೇಳಿದರು.

ಅರಕಲಗೂಡು, ಹೊಳೆನರಸೀಪುರ, ಆಲೂರು, ಸಕಲೇಶಪುರ ತಾಲೂಕುಗಳಲ್ಲಿ ಮನೆಗಳಿಗೆ ಹೆಚ್ಚು ಹಾನಿಯಾಗಿದೆ. ಈ ತಾಲೂಕುಗಳಲ್ಲಿ 28 ಮನೆಗಳು ಸಂಪೂರ್ಣ ಕುಸಿದಿವೆ. 218 ಮನೆಗಳಿಗೆ ಭಾಗಶಃ ಹಾನಿಯಾಗಿದೆ, 175 ಮನೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಮನೆ ಕಳೆದುಕೊಂಡಿರುವವರಿಗೆ ಎನ್‌ಡಿಆರ್‌ಎಫ್ ನಿಯಮಾವಳಿ ಅಡಿಯಲ್ಲಿ ಪರಿಹಾರ ನೀಡಲಾಗುತ್ತಿದೆ. ಇದುವರೆಗೂ ಜಿಲ್ಲೆಯ ಎಲ್ಲೂ ಕೂಡ ಆಶ್ರಯ ಕೇಂದ್ರ ತೆರೆದಿಲ್ಲ ಎಂದು ಹೇಳಿದರು.

ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳು ಹಾಳಾಗಿದ್ದು, ಅವುಗಳ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಎನ್‌ಎಚ್-75 ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತವಾದ ಕಾರಣ ಎಲ್ಲಾ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಲಘು ವಾಹನಗಳನ್ನು ಚಾರ್ಮಾಡಿಘಾಟ್, ಸಂಪಾಜೆ ಮೂಲಕ ತೆರಳಲು ಸೂಚಿಸಿದ್ದೆವು. ಅದು ದೂರವಾಗುತ್ತಿರುವ ಕಾರಣ ಭಾನುವಾರ ಮತ್ತೆರಡು ಬದಲಿ ಮಾರ್ಗಗಳನ್ನು ಸೂಚಿಸಿದ್ದೇವೆ ಎಂದು ಹೇಳಿದರು.

ಮಲೆನಾಡು ಭಾಗದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ದುರಸ್ತಿ ಕಾರ್ಯ ಕಷ್ಟವಾಗುತ್ತಿದೆ. ಮಳೆ ಕಡಿಮೆಯಾದರೆ ಇನ್ನೊಂದು ವಾರದಲ್ಲಿ ಸಂಚಾರ ಆರಂಭಿಸುತ್ತೇವೆ. ಹಾಗೆಯೇ ಜಿಲ್ಲೆಯಲ್ಲಿ 224 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕಳೆದ ಎರಡು ದಿನಗಳಿಂದ ಕಾಫಿ ಬೆಳೆಗೂ ಹಾನಿಯಾಗುತ್ತಿದೆ. ಈ ಬಗ್ಗೆ ವರದಿ ನೀಡುವಂತೆ ಕಾಫಿ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ವರದಿ ಆಧರಿಸಿ ನಷ್ಟ ಅನುಭವಿಸಿರುವ ಕಾಫಿ ಬೆಳೆಗಾರರಿಗೂ ಪರಿಹಾರ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

Join Whatsapp
Exit mobile version