Home ಟಾಪ್ ಸುದ್ದಿಗಳು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್’ಗೆ ಅಪಮಾನ ಮಾಡಿದ್ರಾ ಸ್ಪೀಕರ್ ಯು.ಟಿ ಖಾದರ್?

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್’ಗೆ ಅಪಮಾನ ಮಾಡಿದ್ರಾ ಸ್ಪೀಕರ್ ಯು.ಟಿ ಖಾದರ್?

`ಕೈಗೆ ಕಬ್ಬಿಣ ಕೊಡಿ’ ಎಂಬ ಸ್ಪೀಕರ್ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ

ಬೆಂಗಳೂರು : ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕೈಗೆ ಕಬ್ಬಿಣ ಕೊಡಿ ಎಂದು ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ ಖಾದರ್ ಹೇಳಿದ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪ್ರದೀಪ್ ಈಶ್ವರ್ ಬೆಂಬಲಿಗರು ಸಹ ಸ್ಪೀಕರ್ ಆಡಿರುವ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕರ ಹಕ್ಕು ಅಧಿಕಾರಗಳನ್ನು ರಕ್ಷಿಸಬೇಕಾದ ಸಭಾಧ್ಯಕ್ಷರೇ ಶಾಸಕನನ್ನು ಹೀಯಾಳಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.


ವಿಧಾನಸಭೆ ಅಧಿವೇಶನದಲ್ಲಿ ನಿನ್ನೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಬಿಜೆಪಿ ಶಾಸಕರ ನಡುವೆ ಮಾತಿನ ಜಟಾಪಟಿ ನಡೆದಿತ್ತು. ವಾಲ್ಮೀಕಿ ಹಗರಣದ ಸಂಬಂಧ ಬಿಜೆಪಿಯವರು ಸದನದ ಬಾವಿಗಿಳಿದು ಪ್ರತಿಭಟಿಸಿದ್ದನ್ನು ವಿರೋಧಿಸಿ ಮಾತನಾಡಿದ್ದ ಪ್ರದೀಪ್ ಈಶ್ಚರ್, ಬಿಜೆಪಿ ಅವಧಿಯಲ್ಲಿ ನಡೆದ ಹಗರಣದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ವೇಳೆ ಬಿಜೆಪಿ ಶಾಸಕರು ಬಂಡಲ್, ಮೆಂಟಲ್ ಎಂದು ಪ್ರದೀಪ್ ಈಶ್ವರ್ ಅವರನ್ನು ವ್ಯಂಗ್ಯವಾಡಿದ್ದರು. ಇದರಿಂದ ಪ್ರದೀಪ್ ಈಶ್ವರ್ ಮತ್ತಷ್ಟು ಕುಪಿತಗೊಂಡಿದ್ದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಖಾದರ್ ಅವರು ಪ್ರದೀಪ್ `ಈಶ್ವರ್ ನಿನಗೆ ಏನಾಗಿದೆ, ಪ್ರದೀಪ್ ಈಶ್ವರ್ ಕೈಗೆ ಕಬ್ಬಿಣ ಕೊಡಿ’ ಎಂದು ಹೇಳಿದ್ದರು.


ಸ್ಪೀಕರ್ ಅವರ ಈ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರದೀಪ್ ಈಶ್ವರ್ ಮೇಲೆ ಅಪಮಾನಕರ ಘೋಷಣೆ ಕೂಗಿದ ಬಿಜೆಪಿ ಶಾಸಕರನ್ನು ಬಾಯಿಮುಚ್ಚಿಸುವ ಬದಲು ಸ್ಪೀಕರ್ ಖಾದರ್ ಅವರು ಪ್ರದೀಪ್ ಈಶ್ವರ್ ಅವರನ್ನೇ ಮತ್ತಷ್ಟು ಅಪಮಾನ ಮಾಡಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ‘ಕೈಗೆ ಕಬ್ಬಿಣ ಕೊಡಿ’ ಎಂದಿದ್ದು ಒಂದು ನಿರ್ದಿಷ್ಟ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಮಾಡಿರುವ ಅಪಮಾನವಾಗಿದ್ದು, ಸ್ಪೀಕರ್ ಆದವರು ಈ ರೀತಿ ಲಘುವಾಗಿ ಮಾತನಾಬಾರದು ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಮಾಲ್ ನವರು ರೈತನಿಗೆ ಅಪಮಾನ ಮಾಡಿದ್ದನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಕ್ರಮಕ್ಕೆ ಆಗ್ರಹಿಸಿದ್ದ ಸ್ಪೀಕರ್ ಖಾದರ್ ಅವರು ವಿಧಾನಸಭೆಯಲ್ಲೇ ಶಾಸಕರೊಬ್ಬರನ್ನು ಅಪಮಾನ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.


ಯು.ಟಿ ಖಾದರ್ ಅವರನ್ನು ಕರ್ನಾಟಕದ ಮೊದಲ ಮುಸ್ಲಿಂ ಸಭಾಧ್ಯಕ್ಷರನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಆದರೆ ವಿಧಾನಸಭೆ ಕಲಾಪದಲ್ಲಿ ಸ್ಪೀಕರ್ ಅವರ ನಡೆನುಡಿಗಳು ಬಿಜೆಪಿ ಪರವಾಗಿರುವಂತೆ ಭಾಸವಾಗುತ್ತಿದೆ ಎಂಬ ಆಕ್ಷೇಪದ ಮಾತುಗಳು ಕೇಳಿಬಂದಿದೆ. ಸ್ಪೀಕರ್ ಖಾದರ್ ಅವರು ಕಲಾಪದಲ್ಲಿ ಕಾಂಗ್ರೆಸ್ ಶಾಸಕರ ಬಾಯಿ ಮುಚ್ಚಿಸುವ ರೀತಿಯಲ್ಲಿ ಬಿಜೆಪಿಯವರ ಬಾಯಿ ಮುಚ್ಚಿಸುವುದಿಲ್ಲ ಎಂಬ ಅಸಮಾಧಾನಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ಸ್ಪೀಕರ್ ಅವರು ಇದೇ ರೀತಿ ಮುಂದುವರಿದರೆ ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ವಿರುದ್ಧ ರಾಹುಲ್ ಗಾಂಧಿ ಸಿಡಿದು ನಿಂತಂತೆ ವಿಧಾನಸಭೆಯಲ್ಲೂ ಪ್ರದೀಪ್ ಈಶ್ವರ್ ನಂಥ ಶಾಸಕರು ಸಿಡಿದೇಳಬೇಕು ಎಂದು ನೆಟ್ಟಿಗರು ಸಲಹೆ ಕೂಡ ನೀಡಿದ್ದಾರೆ.


ಇದೇ ವೇಳೆ ಸ್ಪೀಕರ್ ವಿರುದ್ಧ ಇನ್ನೊಂದಿಷ್ಟು ಮಂದಿ ಪರೋಕ್ಷವಾಗಿಯು ವಾಗ್ದಾಳಿ ನಡೆಸಿದ್ದಾರೆ. ರೈತನಿಗೆ ಮಾಲ್ ನಲ್ಲಿ ಅಪಮಾನ ಆಗಿದ್ದನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಕ್ರಮಕ್ಕೆ ಆಗ್ರಹಿಸಿದವರು, ಶ್ರೀರಂಗಪಟ್ಟಣದಲ್ಲಿ ಕಲ್ಲಡ್ಕ ಭಟ್ ಮಹಿಳೆಯರನ್ನು ನಿಂದಿಸಿದಾಗ, ಹರೀಶ್ ಪೂಂಜ ಬೆಳ್ತಂಗಡಿ ಪೊಲೀಸ್ ಠಾಣೆಗೆ ನುಗ್ಗಿ ಬೆದರಿಕೆ ಹಾಕಿದಾಗ, ಉಳ್ಳಾಲ ತಾಲೂಕಿನ ಬೋಳಿಯಾರಿನಲ್ಲಿ ಅಮಾಯಕ ಮುಸ್ಲಿಮರನ್ನು ಪೊಲೀಸರು ಬೇಟೆಯಾಡಿದಾಗ ಯಾಕೆ ಸುಮ್ಮನಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

Join Whatsapp
Exit mobile version