Home ಕರಾವಳಿ ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಂಘಪರಿವಾರದ ಗೂಂಡಾಗಳಿಗೆ ಹೊರಗುತ್ತಿಗೆ ನೀಡಲಾಗಿದೆಯೇ: SDPI ಪ್ರಶ್ನೆ

ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಂಘಪರಿವಾರದ ಗೂಂಡಾಗಳಿಗೆ ಹೊರಗುತ್ತಿಗೆ ನೀಡಲಾಗಿದೆಯೇ: SDPI ಪ್ರಶ್ನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದ ಗೂಂಡಾಗಳ ಅನೈತಿಕ ಪೊಲೀಸ್’ಗಿರಿ ಮಿತಿ ಮೀರುತ್ತಿದ್ದು ಉತ್ತರ ಪ್ರದೇಶದ ಗೂಂಡಾ ಸಂಸ್ಕೃತಿಯನ್ನು ಮಂಗಳೂರಿನಲ್ಲಿ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರಲು ದುಷ್ಟಶಕ್ತಿಗಳು ಶ್ರಮಿಸುತ್ತಿವೆ.  ಪೊಲೀಸ್ ಇಲಾಖೆ ಕೂಡಲೇ ಇದಕ್ಕೆ ಕಡಿವಾಣ ಹಾಕದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆಗಳಿವೆ. ಪೊಲೀಸ್ ಇಲಾಖೆ ನಿರ್ವಹಿಸಬೇಕಾದ ಕಾನೂನು ಸುವ್ಯವಸ್ಥೆಯನ್ನು ಸಂಘಪರಿವಾರದ ಗೂಂಡಾಗಳಿಗೆ ಹೊರಗುತ್ತಿಗೆ ನೀಡಲಾಗಿದೆಯೇ ಎಂದು SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.

 ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ ಅವರು, ಇತ್ತೀಚೆಗೆ ಮಂಗಳೂರಿನ ಚಿನ್ನದ ಅಂಗಡಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಅಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ಯುವಕನಿಗೆ ಥಳಿಸಿದ್ದಾರೆ. ಆ ನಂತರ ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಗೂಂಡಾಗಳು ನಿನ್ನೆ ಬಂಟ್ವಾಳ ತಾಲೂಕಿನ ರಾಯಿಯಲ್ಲಿ ಸುಳ್ಳು ಆರೋಪ ಹೊರಿಸಿ ಅಮಾಯಕ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ಭೀಕರವಾಗಿ ಹಲ್ಲೆ ನಡೆಸುವ ಮೂಲಕ ಉತ್ತರ ಪ್ರದೇಶದ ಗೂಂಡಾ ಸಂಸ್ಕೃತಿಯನ್ನು ರಾಜಾರೋಷವಾಗಿ ಮಾಡಿದ್ದಾರೆ. ಗಂಭೀರ ಗಾಯಗೊಂಡ ಸಂತ್ರಸ್ತರಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡದೆ ಪೊಲೀಸರು ಬಿಟ್ಟು ಕಳಿಸಿದ್ದಾರೆ.ಇದರ ವಿರುದ್ಧ ಅವರ ಸಂಬಂಧಿಕರು ಸುಮೋಟೋ ಕೇಸು ದಾಖಲಿಸುವಂತೆ ಪೊಲೀಸರಲ್ಲಿ ಕೇಳಿಕೊಂಡಾಗ ನಮಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಕ್ತ ಸ್ವಾತಂತ್ರ್ಯ ಇಲ್ಲ ಎಂದು ಹೇಳಿರುವುದು ಪೊಲೀಸರ ಅಸಹಾಯಕತೆ ಮತ್ತು ಒತ್ತಡವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

  ಈ ಘಟನೆ ಒಂದು ಗಂಭೀರ ಸ್ವರೂಪದ ವಿಚಾರವಾಗಿದೆ. ಆದ್ದರಿಂದ ಜಿಲ್ಲಾಡಳಿತ, ಮಂಗಳೂರು ನಗರ ಪೋಲಿಸ್ ಕಮಿಷನರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಬಸ್ಸು ನಿರ್ವಾಹಕ ಸೇರಿದಂತೆ ಘಟನೆಗೆ ಸಂಬಂಧಪಟ್ಟ ಎಲ್ಲಾ ಆರೋಪಿಗಳನ್ನು ಯಾವುದೇ ಒತ್ತಡಗಳಿಗೆ ಮಣಿಯದೆ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಅನ್ವರ್ ಸಾದತ್ ಬಜತ್ತೂರು ಒತ್ತಾಯಿಸಿದ್ದಾರೆ.

Join Whatsapp
Exit mobile version