Home ಟಾಪ್ ಸುದ್ದಿಗಳು ಹರಿಯಾಣ ಮುನ್ಸಿಪಾಲಿಟಿ ಚುನಾವಣೆ: ಬಿಜೆಪಿ ಮುನ್ನಡೆ, ಖಾತೆ ತೆರೆದ ಎಎಪಿ

ಹರಿಯಾಣ ಮುನ್ಸಿಪಾಲಿಟಿ ಚುನಾವಣೆ: ಬಿಜೆಪಿ ಮುನ್ನಡೆ, ಖಾತೆ ತೆರೆದ ಎಎಪಿ

ಚಂಡೀಗಡ: ಹರಿಯಾಣದ 18 ಮುನ್ಸಿಪಲ್ ಕೌನ್ಸಿಲ್ ಮತ್ತು 28 ಮುನಿಸಿಪಲ್ ಕಮಿಟಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಬುಧವಾರ ಮುಂದುವರಿದಿದ್ದು, ಹಲವು ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಎಎಪಿ- ಆಮ್ ಆದ್ಮಿ ಪಕ್ಷವು ಇಸ್ಮಾಯಿಲಾಬಾದ್ (ಕೈತಾಲ್) ಮುನ್ಸಿಪಲ್ ಕಮಿಟಿಯನ್ನು ಚೇರ್ಮನ್ ಹುದ್ದೆಯಲ್ಲಿ ಗೆಲುವು ಕಂಡಿದೆ. ಆದರೆ ರಾಜ್ಯ ಮಟ್ಟದಲ್ಲಿ ಎಎಪಿಯ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ.


ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಿಲ್ಲ. ಕಾಂಗ್ರೆಸ್ಸಿನ ಹಿರಿಯ ನಾಯಕರು ಯಾರೂ ಚುನಾವಣೆಯಲ್ಲಿ ಆಸಕ್ತಿ ತೋರಿಸಿ ಪಾಲ್ಗೊಳ್ಳಲಿಲ್ಲ.
ಓಂಪ್ರಕಾಶ್ ಚೌತಾಲಾರ ಐಎನ್ ಎಲ್ ಡಿ ಮತ್ತು ದುಷ್ಯಂತ್ ಚೌತಾಲಾರ ಜೆಜೆಪಿ ಕೆಲವು ಕಡೆ ಗೆಲುವು ದಾಖಲಿಸಿವೆ.
ಜೂನ್ 19ರಂದು ನಡೆದ ಮತದಾನದಲ್ಲಿ 70%ದಷ್ಟು ಮತದಾನವಾಗಿತ್ತು. ಆಳುವ ಬಿಜೆಪಿ, ಅದರ ಮೈತ್ರಿ ಪಕ್ಷ ಜೆಜೆಪಿ ಅಲ್ಲದೆ ಐಎನ್ ಎಲ್ ಡಿ ಹಾಗೂ ಎಎಪಿ ಪಕ್ಷಗಳು ಸ್ಪರ್ಧಿಸಿದ್ದವು. ಕಾಂಗ್ರೆಸ್ ಬೆಂಬಲದೊಡನೆ ಕೆಲವರು ಅಲ್ಲಲ್ಲಿ ಸ್ಪರ್ಧಿಸಿದ್ದರು.


ಹರಿಯಾಣದಲ್ಲಿ ಬಿಜೆಪಿ ಬಳಿಕದ ದೊಡ್ಡ ಪಕ್ಷವಾದ ಕಾಂಗ್ರೆಸ್ಸಿಗೆ ಮುನಿಸಿಪಲ್ ಮಟ್ಟದಲ್ಲಿ ಸಂಘಟನೆಗೆ ಜನರೇ ಸಿಗಲಿಲ್ಲ ಎನ್ನಲಾಗಿದೆ. ಹರಿಯಾಣದ ಕಾಂಗ್ರೆಸ್ ನಾಯಕರು ಪರಸ್ಪರ ಕಚ್ಚಾಡುವುದರಲ್ಲೇ ನಿರತರಾಗಿದ್ದು, ತಳ ಮಟ್ಟದಲ್ಲಿ ಸಂಘಟನೆ ಕಳೆದುಕೊಂಡಿದ್ದಾರೆ ಎನ್ನುತ್ತಿದ್ದಾರೆ. ಹರಿಯಾಣದ ಕಾಂಗ್ರೆಸ್ ಉಸ್ತುವಾರಿ ವಿವೇಕ್ ಬನ್ಸಾಲ್ ಅವರು ಇತ್ತೀಚಿನ ಚಿಂತನ ಶಿಬಿರದಲ್ಲಿ ಸ್ಪರ್ಧಿಸದಿರುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹೊಸದಾಗಿ ತಳ ಮಟ್ಟದಿಂದ ಸಂಘಟನೆ ಆರಂಭವಾಗಿದೆ ಎಂದು ಹೇಳಿದರು.


46 ಮುನಿಸಿಪಾಲಿಟಿಗಳಿಗೆ ನಡೆದ ಚುನಾವಣೆಯಲ್ಲಿ ಕಳೆದ ಬಾರಿಗಿಂತ 10% ಮತದಾನ ಕಡಿಮೆಯಾಗಿತ್ತು. ಅಗ್ನಿಪಥದ ವಿರುದ್ಧ ಪ್ರತಿಭಟನೆ ತೀವ್ರವಾಗಿದ್ದು, ಜನರು ಮತ ಚಲಾಯಿಸಲು ಹೋಗದ್ದನ್ನು ಬಿಜೆಪಿ ಬಳಸಿಕೊಂಡಿತು ಎಂದೂ ಹೇಳಲಾಗುತ್ತಿದೆ.

Join Whatsapp
Exit mobile version