Home ಟಾಪ್ ಸುದ್ದಿಗಳು ಹರ್ ಘರ್ ತಿರಂಗಾ: ಯಾವ ನೇಕಾರನಿಗೂ ಬಾವುಟ ಗುತ್ತಿಗೆ ನೀಡಿಲ್ಲ- ನೇಕಾರರ ಸಂಘ ಆಕ್ರೋಶ

ಹರ್ ಘರ್ ತಿರಂಗಾ: ಯಾವ ನೇಕಾರನಿಗೂ ಬಾವುಟ ಗುತ್ತಿಗೆ ನೀಡಿಲ್ಲ- ನೇಕಾರರ ಸಂಘ ಆಕ್ರೋಶ

ನವದೆಹಲಿ: ಹರ್ ಘರ್ ತಿರಂಗಾ ಎಂಬ ಮನೆ ಮನೆ ಬಾವುಟದ ಯೋಜನೆ ಉತ್ತಮ ಎಂದು ಹೇಳಬಹುದು. ಆದರೆ  ಕೋಟಿಗಟ್ಟಲೆ ರಾಷ್ಟ್ರ ಧ್ವಜಗಳು ತಯಾರಾದುದರಿಂದ ನಮ್ಮ ನೇಕಾರರಿಗೆ ಕೈ ತುಂಬ ಕೆಲಸ ಸಿಕ್ಕಿರಬೇಕು ಎಂದು ಜನರು ಭಾವಿಸುವುದು ಸಹಜ. ಆದರೆ ಸತ್ಯವು ಅದಕ್ಕೆ ಪೂರ್ತಿ ವ್ಯತಿರಿಕ್ತವಾದುದಾಗಿದೆ.

“ಯಾವನೇ ಒಬ್ಬ ನೇಕಾರ ಕೂಡ ರಾಷ್ಟ್ರ ಧ್ವಜ ತಯಾರಿಕೆಗೆ ಸರ್ಕಾರಿ ಆರ್ಡರ್ ಸಿಕ್ಕಿಲ್ಲ. ಆಂಧ್ರ ಪ್ರದೇಶ ಮಾತ್ರವಲ್ಲ, ಇಡೀ ದೇಶದಲ್ಲೇ ನೇಕಾರನನ್ನು ಈ ವಿಷಯದಲ್ಲಿ ಇಣುಕಿ ಕೂಡ ನೋಡಿಲ್ಲ.” ಎಂದು ಆಂಧ್ರ ಪ್ರದೇಶ ಚೆನೇತ (ನೇಕಾರ) ಕಾರ್ಮಿಕ ಸಂಘದ ನಾಯಕ ಹೇಳಿದ್ದಾರೆ.

ದುರಂತದ ಸಂಗತಿಯೆಂದರೆ ಹೆಚ್ಚಿನ ಬಾವುಟ ತಯಾರಿಕೆಗೆ ಬಟ್ಟೆಯನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ.

“ಸ್ವದೇಶದ ಚಿಹ್ನೆ ಮತ್ತು ಚರಕದ ಗುರುತಿನ ಹಿಂದಿನ ಧ್ವಜವು ನೇಕಾರರನ್ನು ಪ್ರತಿನಿಧಿಸುತ್ತದೆ. ಇಂದು ನಾವು ಮಹೋನ್ನತವಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಆದರೆ ನೇಕಾರರನ್ನು ಏಕೆ ಮರೆತಿದ್ದೇವೆ. ಚರಕ ಮತ್ತು ನೇಕಾರಿಕೆ ನಮ್ಮ ಸ್ವಾತಂತ್ರ್ಯ ಹೋರಾಟದ ಬಹು ಮುಖ್ಯ ಭಾಗವಾಗಿತ್ತು. ಅದನ್ನೇ ಮರೆತ ಕಾರಣ ಏನು?” ಆಂಧ್ರ ಪ್ರದೇಶ ಚೆನೇತ ಕಾರ್ಮಿಕ ಸಂಘದ ಉಪಾಧ್ಯಕ್ಷರಾದ ಪಿಲ್ಲಲಮರಿ ನಾಗೇಶ್ವರ ರಾವ್ ಪ್ರಶ್ನಿಸುತ್ತಾರೆ.

ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಯಾವುದೇ ದೇಶದೆಲ್ಲೆಡೆಯ ನೇಕಾರರ ಸಂಘಗಳಿಗೆ, ಕೈಮಗ್ಗ ತಯಾರಕ ಕೂಟಗಳಿಗೆ ದೇಶ ಬಾವುಟ ತಯಾರಿಸಿ ಕೊಡಲು ಬೇಡಿಕೆ ಮುಂದಿಟ್ಟಿಲ್ಲ. ದಿಗಿಲೂಡುವ ಸಂಗತಿ ಎಂದರೆ ಖಾದಿ ಗ್ರಾಮೀಣ ಉದ್ಯೋಗಕ್ಕೆ ಕೂಡ ತಯಾರಿಸಲು ಹೇಳಿಲ್ಲ.

2021ರ ಡಿಸೆಂಬರ್ 30ರಂದು ಈ ಸರಕಾರವು ರಾಷ್ಟ್ರ ಧ್ವಜಕ್ಕೆ ಹೊಸ ತಿದ್ದುಪಡಿ ನೀತಿ ಅಳವಡಿಸಿಕೊಂಡಿದ್ದು, ಅದರಂತೆ ಕೈಮಗ್ಗದ, ಖಾದಿ ಬಟ್ಟೆಯಲ್ಲೇ ರಾಷ್ಟ್ರ ಧ್ವಜ ತಯಾರಿಸಬೇಕು ಎಂದೇನಿಲ್ಲ. ಪಾಲಿಯೆಸ್ಟರ್ ಮೊದಲಾದ ಬಟ್ಟೆ ಬಳಸಬಹುದು, ಯಂತ್ರಗಳಿಂದ ತಯಾರಿಸಬಹುದು ಎಂಬುದು ಪೂರ್ವ ಯೋಜಿತ ಎಂದು ಆಂಧ್ರ ಪ್ರದೇಶ ಚೆನೇತ ಕಾರ್ಮಿಕ ಸಂಘದ ಅಧ್ಯಕ್ಷ ಹೇಮ ಸುಂದರ ರಾವ್ ಹೇಳಿದರು.

“ರಾಷ್ಟ್ರ ಧ್ವಜ ತಯಾರಿಕೆಗೆ ನಿಯಮ ತಿದ್ದುಪಡಿ ಮೂಲಕ ಹತ್ತಿಯ ಖಾದಿ, ಕೈಮಗ್ಗದ ಬಟ್ಟೆಯ ಬದಲು ಯಂತ್ರ ತಯಾರಿಸಿದ ಬಟ್ಟೆ ಬಳಸಲು ಮಾಡಿದ ನಿಯಮವನ್ನು ನಾವು ಒಪ್ಪಿಕೊಳ್ಳೋಣ. ಹಾಗೆಂದ ಕೂಡಲೆ ನೇಕಾರರನ್ನು ದೇಶದ ಬಾವುಟ ತಯಾರಿಸುವಿಕೆಯಿಂದ ಸಂಪೂರ್ಣವಾಗಿ ದೂರ ಇಡಬೇಕೆ? ವಿಷಾದನೀಯವೆಂದರೆ ಅದು ನಡೆದಿದೆ.” ಅವರು ನೋವಿನಿಂದ ತಿಳಿಸಿದರು.

ಶಾಲಾ ಸಮವಸ್ತ್ರಗಳನ್ನು ಕೂಡ ಕೈಮಗ್ಗದ ಬದಲು ಯಂತ್ರ ಮಗ್ಗ ಮತ್ತು ಯಾಂತ್ರಿಕ ವ್ಯವಸ್ಥೆ ಮೂಲಕ ಪೂರೈಸುತ್ತಿರುವ ಸರಕಾರದ ನಿಯಮ ಕೂಡ ನೇಕಾರರ ಅತೃಪ್ತಿಗೆ ಕಾರಣವಾಗಿದೆ.

“ಎಪಿಸಿಓ- ಆಂಧ್ರ ಪ್ರದೇಶದ ಕೈಮಗ್ಗ ನೇಕಾರರ ಸಹಕಾರ ಸಂಘವು ಶಾಲಾ ಸಮವಸ್ತ್ರಗಳಿಗಾಗಿ ಎಂದು 22 ಕೋಟಿ ರೂಪಾಯಿಯ ಸರಕಾರೀ ಆರ್ಡರನ್ನು ನಾಗರಿಯ ಪವರ್ ಲೂಮ್ ಗಳಿಗೆ ನೀಡಿದೆ” ಎಂದೂ ನಾಗೇಶ್ವರ ರಾವ್ ಹೇಳಿದರು.

Join Whatsapp
Exit mobile version