Home ಟಾಪ್ ಸುದ್ದಿಗಳು ಮೈಸೂರು | ಹನುಮ ಜಯಂತಿ ವೇಳೆ ಯುವಕನ ಕೊಲೆ: ಇಬ್ಬರು ಆರೋಪಿಗಳ ಬಂಧನ

ಮೈಸೂರು | ಹನುಮ ಜಯಂತಿ ವೇಳೆ ಯುವಕನ ಕೊಲೆ: ಇಬ್ಬರು ಆರೋಪಿಗಳ ಬಂಧನ

►ಯಾವುದೇ ಕೋಮು ಸಂಘರ್ಷ ನಡೆದಿಲ್ಲ: ಎಸ್ ಪಿ


ಮೈಸೂರು: ಟಿ.ನರಸೀಪುರ ಪಟ್ಟಣದಲ್ಲಿ ಹನುಮ ಜಯಂತಿ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಯುವಕನೋರ್ವನ್ನು ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.


ವೇಣುಗೋಪಾಲ್ ನಾಯಕ್ (32) ಕೊಲೆಯಾದ ಯುವಕ. ಮಣಿ ಹಾಗೂ ಸಂದೇಶ್ ಬಂಧಿತ ಆರೋಪಿಗಳಾಗಿದ್ದು, ತಲೆ ಮರೆಸಿಕೊಂಡಿರುವ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಟಿ ನರಸೀಪುರದಲ್ಲಿ ಧರ್ಮ ಜಾಗೃತಿ ಬಳಗದ ವತಿಯಿಂದ ಶನಿವಾರ ಹನುಮ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಶ್ರೀ ಗುಂಜ ನರಸಿಂಹಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಸಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಣಿಕಂಠ ಮತ್ತು ಸಂದೇಶ್ ಎಂಬುವವರು ಬೈಕ್ನಲ್ಲಿ ಬಂದಿದ್ದಕ್ಕೆ ಆಯೋಜಕರು ಮತ್ತು ವೇಣುಗೋಪಾಲ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿತ್ತು. ಮಣಿಕಂಠ ಮತ್ತು ಸಂದೇಶ್ ಪುನೀತ್ ರಾಜ್ಕುಮಾರ್ ಫೋಟೊ ಇರುವ ಬ್ಯಾನರ್ ಹಾಕಲು ಮುಂದಾದಾದ ಅದನ್ನು ವೇಣುಗೋಪಾಲ್ ತಡೆದಿದ್ದು ಜಗಳ ಉಲ್ಭಣವಾಗಲು ಕಾರಣವಾಗಿತ್ತು.


ಕುಪಿತಗೊಂಡು ವೇಣುಗೋಪಾಲ್ ಮೇಲೆ ಹಗೆ ಸಾಧಿಸಿದ ಮಣಿಕಂಠ ಮತ್ತು ಸಂದೇಶ್ ಭಾನುವಾರ ಮಧ್ಯಾಹ್ನ ಶಾಮಿಯಾನ ಅಂಗಡಿಯಲ್ಲಿ ವೇಣುಗೋಪಾಲ್ ಜೊತೆ ಗಲಾಟೆ ಆರಂಭಿಸಿದ್ದರು. ಪೊಲೀಸರು ಬಂದಿದ್ದಕ್ಕೆ ಸುಮ್ಮನಾದ ಅವರು ಸಂಜೆ ವೇಳೆ ರಾಜಿ ಪಂಚಾಯ್ತಿಗೆ ಎಂದು ಮಾರುತಿ ಸರ್ವೀಸ್ ಸ್ಟೇಷನ್ ಬಳಿ ಕರೆಸಿಕೊಂಡು ಮದ್ಯದ ಬಾಟಲಿಗಳಿಂದ ಹೊಡೆದು, ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.


ಹನುಮ ಜಯಂತಿ ವೇಳೆ ಟಿ.ನರಸೀಪುರದಲ್ಲಿ ಯಾವುದೇ ಕೋಮು ಸಂಘರ್ಷ ನಡೆದಿಲ್ಲ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹೇಳಿದ್ದಾರೆ.

Join Whatsapp
Exit mobile version