ಮಂಡ್ಯ: ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ ತಾರಕಕ್ಕೇರಿದ್ದು, ಮಹಿಳೆಯರು ಧ್ವಜಸ್ಥಂಭ ಹತ್ತಿ ಫ್ಲೆಕ್ಸ್ ಕಟ್ಟಿದ್ದಾರೆ. ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರದಲ್ಲಿ ಹನುಮಧ್ವಜವನ್ನು ಕಟ್ಟಲಾದ ಬಳಿಕ ವಿವಾದ ಆರಂಭವಾಗಿತ್ತು. ಭಾರಿ ವಿರೋಧದ ನಡುವೆಯೇ ಧ್ವಜವನ್ನು ಪೊಲೀಸರು ಕೆಳಗಿಳಿಸಿದ್ದಾರೆ. ಇದರಿಂದ ಪ್ರತಿಭಟನೆ ಜೋರಾಗಿದ್ದು, ಜಿಲ್ಲಾಡಳಿತ ಕೆರಗೋಡು ಗ್ರಾಮದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಿದೆ. ಆದರೂ ಮಹಿಳೆಯರು ಸೇರಿದ ಗುಂಪು ಧ್ವಜಸ್ಥಂಭ ಹತ್ತಿ ಫ್ಲೆಕ್ಸ್ ಕಟ್ಟಿದ್ದಾರೆ.
ಹನುಮ ಧ್ವಜ ಹೋರಾಟ ತೀವ್ರಗೊಂಡಿದ್ದು, ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಬಿಗಿ ಭದ್ರತೆ ವಹಿಸಿದ್ದಾರೆ. ಹೋರಾಟಗಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಘಟನಾ ಸ್ಥಳಕ್ಕೆ ಬಿಜೆಪಿ ನಿಯೋಗ ಕೂಡ ಧಾವಿಸಲಿದೆ.
ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಬೃಹತ್ ಹನುಮ ಧ್ವಜವನ್ನು ಹಾರಿಸಲಾಗಿತ್ತು. ನಂತರ ಧ್ವಜ ತೆರವಿಗೆ ಅಧಿಕಾರಿಗಳು ಮುಂದಾದ ಹಿನ್ನೆಲೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಭಾರಿ ವಿರೋಧದ ನಡುವೆ ಹನುಮ ಧ್ವಜವನ್ನು ತೆರವುಗೊಳಿಸಲಾಗಿತ್ತು.