Home ಟಾಪ್ ಸುದ್ದಿಗಳು ಮಹಾರಾಷ್ಟ್ರ | ಹನುಮಾನ್ ಚಾಲಿಸಾ ಕೇಸ್; ಬಂಧಿತ ರಾಣಾ ದಂಪತಿ ಪ್ರತ್ಯೇಕ ಜೈಲಿಗೆ

ಮಹಾರಾಷ್ಟ್ರ | ಹನುಮಾನ್ ಚಾಲಿಸಾ ಕೇಸ್; ಬಂಧಿತ ರಾಣಾ ದಂಪತಿ ಪ್ರತ್ಯೇಕ ಜೈಲಿಗೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ ಮಾತೋಶ್ರೀ ಎದುರು ಹನುಮಾನ್ ಚಾಲಿಸ ಪಠಣಕ್ಕೆ ಕರೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಾಸಕ- ಸಂಸದೆ ದಂಪತಿಯನ್ನು ಪ್ರತ್ಯೇಕ ಜೈಲಿಗೆ ಕಳುಹಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದ ಸಂಸದೆ ನವನೀತ್ ರಾಣಾ ಅವರನ್ನು ಬೈಕುಲ್ಲಾ ಮಹಿಳಾ ಜೈಲಿಗೆ ಕಳುಹಿಸಲಾಗಿದೆ. ಆಕೆಯ ಪತಿ, ಶಾಸಕ ರವಿ ರಾಣಾ ಅವರನ್ನು ಮುಂಬೈನ ಆರ್ಥರ್ ರೋಡ್ ಜೈಲಿಗೆ ಕೊಂಡೊಯ್ಯಲಾಗಿದೆ. ಆದರೆ ಅಲ್ಲಿ ಸ್ಥಳವಕಾಶದ ಕೊರತೆಯಿಂದಾಗಿ ಕಾನೂನು ವಿಧಿವಿಧಾನ ಪೂರ್ಣಗೊಳಿಸಿದ ನಂತರ ಅವರನ್ನು ನವಿ ಮುಂಬೈ ತಲೋಜ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹನುಮಾನ್ ಚಾಲಿಸ ಪಠಣಕ್ಕೆ ಕರೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣಾ ದಂಪತಿ ವಿರುದ್ಧ ಮುಂಬೈ ಪೊಲೀಸರು ದೇಶದ್ರೋಹದ ಆರೋಪವನ್ನು ಹೊರಿಸಿದ್ದು ಐಪಿಸಿ ಸೆಕ್ಷನ್ 153 ಎ, 34, 37(1) ಮತ್ತು 135, 124 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾಯಾಲಯ ರಾಣಾ ದಂಪತಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ದಂಪತಿಯ ಈ ನಡೆಯನ್ನು ವಿರೋಧಿಸಿ ಶಿವಸೇನೆ ಪ್ರತಿಭಟನೆ ಹಮ್ಮಿಕೊಂಡಿತ್ತು. ರಾಣಾ ಅವರ ಖಾರ್ ನಿವಾಸದ ಎದುರು ಪ್ರತಿಭಟನೆ ನಡೆಸಿದ ಸುಮಾರು 13 ಶಿವಸೇನಾ ಕಾರ್ಯಕರ್ತರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version