ಅರ್ಧ ನಿರ್ಮಾಣ ಮಾಡಿ ಬಿಡಲಾದ ಮೂಡ ಮಾರುಕಟ್ಟೆ ಡೆಂಗ್ಯೂ, ಮಲೇರಿಯಾದ ಕೇಂದ್ರವಾಗಿದೆ: ಮುನೀರ್ ಕಾಟಿಪಳ್ಳ

Prasthutha|

►‘ಭರತ್ ಶೆಟ್ರೆ ನಿಮ್ಮ ಈ ತಪ್ಪಿಗೆ ಯಾರ ಕೆನ್ನೆಗೆ ಬಾರಿಸೋಣ ಹೇಳಿ’

- Advertisement -

ಸುರತ್ಕಲ್: ಇಲ್ಲಿನ ಅರ್ಧ ನಿರ್ಮಾಣ ಮಾಡಿ ಬಿಡಲಾಗಿರುವ ಮೂಡ ಮಾರುಕಟ್ಟೆ ಬೃಹತ್ ಡೆಂಗ್ಯೂ ಮತ್ತು ಮಲೇರಿಯಾ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಡೆಂಗ್ಯೂ ಮತ್ತು ಮಲೇರಿಯಾದಂತಹಾ ರೋಗ ತಡೆಗಟ್ಟಲು ಲಾರ್ವ ಉತ್ಪತ್ತಿ ಕೇಂದ್ರ ಗಳನ್ನು ನಾಶ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಜೊತೆಗೆ ನೀರು ಶೇಖರಣೆಗೊಳ್ಳುವ ಕೈಗಾರಿಕೆಗಳು ಮತ್ತು ಮನೆಗಳಿಗೆ 500ರಿಂದ 15ಸಾವಿರ ರೂ. ವರೆಗೆ ದಂಡ ವಿಧಿಸಲಾಗುತ್ತಿದೆ. ಆದರೆ, ಸುರತ್ಕಲ್ ಅರ್ಧ ನಿರ್ಮಾಣವಾಗಿರುವ ಮೂಡ ಮಾರುಕಟ್ಟೆಯ ಕೆಳ ಅಂತಸ್ತು ತುಂಬಾ ಕೆಸರು ನೀರು ಶೇಖರಣೆಗೊಂಡು ಬೃಹತ್ ಸೊಳ್ಳೆ ಉತ್ಪಾದನಾ ಕೇಂದ್ರವೇ ನಿರ್ಮಾಣವಾಗಿದೆ. ಈ ಬಗ್ಗೆ ಯಾಕೆ ಮಹಾ ನಗರ ಪಾಲಿಕೆ ಗಮನಿಸುತ್ತಿಲ್ಲ. ಈ ಸಂಬಂಧ ಯಾರಿಗೆ ದಂಡ ವಿಧಿಸುತ್ತೀರಿ ಎಂದು ಮುನೀರ್ ಕಾಟಿಪಳ್ಳ ಮಹಾನಗರ ಪಾಲಿಕೆಗೆ ಪ್ರಶ್ನೆ ಮಾಡಿದ್ದಾರೆ.

- Advertisement -

ಈ ಮಾರುಕಟ್ಟೆ ಕಟ್ಟಡ ತಳ ಅಂತಸ್ತಿನ ಭಾಗದಲ್ಲಿ ಹತ್ತಾರು ಲಕ್ಷ ರೂಪಾಯಿ ಖರ್ಚು ಮಾಡಿ ಮಳೆ ನೀರು ಹರಿಯುವ ಒಳ ಚರಂಡಿ  ಪಾಲಿಕೆ ನಿರ್ಮಿಸಿದ್ದು, ಭ್ರಷ್ಟಾಚಾರ, ಕಳಪೆ ಕಾಮಗಾರಿ, ತಪ್ಪಾದ ಡಿಸೈನ್ ನಿಂದ ಪೂರ್ತಿ ನಿರುಪಯೋಗಿ ಆಗಿದೆ. ಇದರಿಂದ ಸುತ್ತಲ ಪ್ರದೇಶದ ಮಳೆ ನೀರು ಹರಿದು ಬಂದು ಮಾರುಕಟ್ಟೆ ಕಟ್ಟಡದ ತಳ ಅಂತಸ್ತಿನಲ್ಲಿ ಸಂಗ್ರಹಗೊಳ್ಳುತ್ತಿದೆ

ಸ್ಥಳೀಯ ಶಾಸಕ ಭರತ್ ಶೆಟ್ಟಿ ಐದಾರು ವರ್ಷಗಳಿಂದ ಕುಂಟುತ್ತಾ ಅರ್ಧದಲ್ಲಿ  ನಿಂತಿರುವ ಕೃಷ್ಣಾಪುರ ಮಾರುಕಟ್ಟೆ ಕಟ್ಟಡದ ಕಡೆಗೆ ಈ ವರಗೆ ಭೇಟಿ ನೀಡಿಲ್ಲ.   ಶಾಸಕರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ಕೆನ್ನೆಗೆ ಬಾರಿಸುವಂತೆ ಕರೆ ನೀಡುತ್ತಿದ್ದಾರೆ ಎಂದ ಮುನೀರ್ ಕಾಟಿಪಳ್ಳ, ಮೂಡ ಮಾರುಕಟ್ಟೆಯನ್ನು ಪೂರ್ಣಗೊಳಿಸದೇ ಬೃಹತ್ ಲಾರ್ವ ಉತ್ಪಾದನಾ ಕೇಂದ್ರವಾಗಲು ಬಿಟ್ಟಿರುವ ಶಾಸಕ ಭರತ್ ಶೆಟ್ಟಿಯವರಿಗೆ ಯಾರು ಹೇಗೆ ಎಲ್ಲಿಗೆ ಹೊಡೆಯಬೇಕೆಂದು ಅವರೇ ತೀರ್ಮಾನಿಸಲಿ ಎಂದರು.

ಈಗ ಡೆಂಗಿ ರೋಗ ಭಯಾನಕವಾಗಿ ಹಬ್ಬತ್ತಿರುವಾಗಲೂ  ತನ್ನದೇ ಬಿಜೆಪಿ ಪಕ್ಷದ ಆಡಳಿತದ ನಗರ ಪಾಲಿಕೆಯ ಕಿವಿ ಹಿಂಡುವ, ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸುವ, ಪರಿಶೀಲಿಸುವ, ಸೂಕ್ತ ಕ್ರಮಗಳಿಗೆ ಮಾರ್ಗದರ್ಶನ ಮಾಡುವ ಜನಪ್ರತಿನಿಧಿಯ ಯಾವುದೇ ಕರ್ತವ್ಯಗಳನ್ನು ನಿರ್ವಹಿಸುತ್ತಿಲ್ಲ. ನಗರ ಪಾಲಿಕೆಯ ಸುರತ್ಕಲ್ ವಲಯದ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು, ಇಂಜಿನಿಯರ್ ಗಳು ದುರಹಂಕಾರಕ್ಕೆ ಕುಖ್ಯಾತರಾಗಿದ್ದು ಜನತೆಯ ದೂರುಗಳಿಗೆ ಪ್ರತಿಕ್ರಿಯೆಯನ್ನೇ ನೀಡುವುದಿಲ್ಲ ಎಂಬ ಆರೋಪವಿದೆ. ಒಟ್ಟಾರೆ ಬಿಜೆಪಿ ಆಡಳಿತದ ನಗರ ಪಾಲಿಕೆ, ಬಿಜೆಪಿ ಶಾಸಕರ ಬೇಜವಾಬ್ದಾರಿತನದಿಂದ  ನಗರ ಉತ್ತರ ಭಾಗದಲ್ಲಿ ಡೆಂಗೀ ಸೊಳ್ಳೆ ಉತ್ಪಾದನೆ ಕೇಂದ್ರಗಳು ಪಾಲಿಕೆಯಿಂದಲೇ ವ್ಯಾಪಕವಾಗಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

Join Whatsapp