Home ಟಾಪ್ ಸುದ್ದಿಗಳು ರಾಜ್ಯದಲ್ಲಿ ತೆಲಂಗಾಣ ಮಾದರಿಯ ಮರಳು ಗಣಿಗಾರಿಕೆ ನೀತಿ ಜಾರಿ: ಸಚಿವ ಹಾಲಪ್ಪ ಆಚಾರ್

ರಾಜ್ಯದಲ್ಲಿ ತೆಲಂಗಾಣ ಮಾದರಿಯ ಮರಳು ಗಣಿಗಾರಿಕೆ ನೀತಿ ಜಾರಿ: ಸಚಿವ ಹಾಲಪ್ಪ ಆಚಾರ್

ಬೆಂಗಳೂರು: ಸರ್ಕಾರದಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 2021-22ನೇ ಸಾಲಿನಲ್ಲಿ 4 ಸಾವಿರ ಕೋಟಿ ರೂ ರಾಜಧನ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದ್ದು, ಜೂನ್ ಅಂತ್ಯದ ವರೆಗೆ 1387.55 ಕೋಟಿ ರೂ ಸಂಗ್ರಹವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಬಸಪ್ಪ ಆಚಾರ್ ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 45 ದಶಲಕ್ಷ ಮೆಟ್ರಿಕ್ ಟನ್ ಮರಳು ಬೇಡಿಕೆ ಇದ್ದು, ಪ್ರಸ್ತುತ 37 ದಶಲಕ್ಷ ಮೆಟ್ರಿಕ್ ಟನ್ ಪೂರೈಕೆ ಆಗುತ್ತಿದೆ. 8 ದಶಲಕ್ಷ ಟನ್ ಮರುಳು ಕೊರತೆಯಿದ್ದು, ಸರ್ವರಿಗೂ ಮರಳು ಸುಗಮವಾಗಿ ದೊರೆಯುವ ಉದ್ದೇಶದಿಂದ ಹೊಸ ಮರಳು ನೀತಿ 2020 ಜಾರಿಗೆ ತರುವ ಕುರಿತು ಈಗಾಗಲೇ ತಜ್ಞರ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಹಲವಾರು ಸಭೆಗಳನ್ನು ನಡೆಸಲಾಗಿದೆ. ಪ್ರಸ್ತುತ ಸಮಿತಿಯು ತೆಲಂಗಾಣ ಮಾದರಿಯಲ್ಲಿ ಮರಳು ಗಣಿಗಾರಿಕೆಯನ್ನು ಜಾರಿಗೆ ತರಲು ಶಿಪಾರಸ್ಸು ಮಾಡಿದೆ ಎಂದರು.

ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಟ್ರಸ್ಟ್ ಗೆ ಜೂನ್ 2021ರ ಅಂತ್ಯದ ವರೆಗೆ 2712.46 ಕೋಟಿ ರೂ ರಾಜಸ್ವ ಸಂಗ್ರಹವಾಗಿದ್ದು, ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಈ ವರೆಗೆ 3645.85 ಕೋಟಿ ರೂ ಮೊತ್ತಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸಿ 7826 ಕಾಮಗಾರಿಗಳನ್ನು ಕೈಗೊಂಡು 2130 ಕ್ರಿಯಾ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. 837.40 ಕೋಟಿ ರೂ ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಬಿ.ಎಂ.ಎಫ್ ಅಡಿಯಲ್ಲಿ 384.49 ಕೋಟಿ ರೂ ಮೊತ್ತವನ್ನು ಕೋವಿಡ್ ನಿಯಂತ್ರಣಕ್ಕಾಗಿ ಮೀಸಲಿರಿಸಲಾಗಿದೆ ಹಾಗೂ ಜೂನ್ 2021ರ ಅಂತ್ಯದ ವರೆಗೆ ರೂ. 157.36 ಕೋಟಿ ಮೊತ್ತವನ್ನು ವೆಚ್ಚ ಮಾಡಲಾಗಿರುತ್ತದೆ.


ಇಲಾಖೆಯ ಅಡಿಯಲ್ಲಿ ಬರುವ ಹಟ್ಟಿ ಚಿನ್ನದಗಣಿ ಹಾಗೂ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ 7 ಚಿನ್ನದ ಗಣಿ ಗುತ್ತಿಗೆಗಳನ್ನು ಮತ್ತು 2 ತಾಮ್ರದ ಗಣಿ ಗುತ್ತಿಗೆಗಳನ್ನು ಹಟ್ಟಿ ಚಿನ್ನದ ಗಣಿ ನಿಯಮಿತದಿಂದ ನಿರ್ವಹಿಸಲಾಗುತ್ತಿದೆ. ರಾಜ್ಯದಲ್ಲಿನ ಕಲ್ಲುಗಣಿಗಾರಿಕೆ ಹಾಗೂ ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದ ಸ್ಪೋಟಗಳ ಘಟನೆ ಕುರಿತು ತಾವು ಸಂಪೂರ್ಣ ಮಾಹಿತಿ ಪಡೆದು ಮಾತನಾಡುವುದಾಗಿ ತಿಳಿಸಿದರು.

ರಾಜ್ಯದಲ್ಲಿನ ಒಟ್ಟು ತೀವ್ರ ಮತ್ತು ಸಾಧಾರಣ ಅಪೌಷ್ಟಿಕ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಳಕಂಡ ಯೋಜನೆಗಳನ್ನು ಜಾರಿಗೊಳಿಸಿದೆ. ಕ್ಷೀರ ಭಾಗ್ಯ ಯೋಜನೆಯಡಿ 6 ತಿಂಗಳಿಂದ 6 ವರ್ಷದ ಎಲ್ಲಾ ಮಕ್ಕಳಿಗೆ ವಾರದಲ್ಲಿ 5 ದಿನ 150 ಮಿ.ಲಿ ಹಾಲು ನೀಡಲಾಗುತ್ತಿದೆ. 6 ತಿಂಗಳಿಂದ 3 ವರ್ಷದ ತೀವ್ರ ಅಪೌಷ್ಟಿಕ ಮಕ್ಕಳಿಗೆ ಹೆಚ್ಚುವರಿಯಾಗಿ ವಾರದಲ್ಲಿ 3 ದಿನ ಮೊಟ್ಟೆ, 3-6 ವರ್ಷದ ತೀವ್ರ ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ವಾರದ 6 ದಿನ ಹಾಲು ನೀಡಲಾಗುತ್ತಿದೆ ಎಂದು ಹೇಳಿದರು.

ಹಿಂದುಳಿದ ಜಿಲ್ಲೆಗಳಾದ ಬೀದರ್, ಗುಲ್ಬರ್ಗಾ, ರಾಯಚೂರು, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳ 6 ತಿಂಗಳಿಂದ – 3 ವರ್ಷದ ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 3 ದಿನ ಮೊಟ್ಟೆ ಹಾಗೂ 3-6 ವರ್ಷದ ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆ ನೀಡಲಾಗುತ್ತಿದೆ, ಮೊಟ್ಟೆ ತಿನ್ನದ ಮಕ್ಕಳಿಗೆ ವಾರದ 6 ದಿನ ಹಾಲು ನೀಡಲಾಗುತ್ತಿದೆ. “ಸೃಷ್ಟಿ” ಯೋಜನೆಯಡಿ 3 ರಿಂದ 6 ವರ್ಷದ ಎಲ್ಲಾ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ಪ್ರತಿ ತಿಂಗಳೂ ಸುಮಾರು 4.5 ಕೋಟಿ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

Join Whatsapp
Exit mobile version