ಶ್ರೀನಗರ: ಸೌದಿ ಅರೇಬಿಯಾವು ಭಾರತೀಯ ಹಜ್ ಯಾತ್ರಿಕರ 52,000 ಸ್ಲಾಟ್ ರದ್ದು ಮಾಡಿರುವ ಕುರಿತಾದ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಮತ್ತು ವಿರೋಧ ಪಕ್ಷದ ನಾಯಕಿ ಮೆಹಬೂಬ ಮುಫ್ತಿ, ಈ ವಿಷಯವನ್ನು ಸೌದಿ ನಾಯಕತ್ವದ ಜೊತೆ ಚರ್ಚಿಸುವಂತೆ ಒತ್ತಾಯಿಸಿದ್ದಾರೆ.
‘ಭಾರತೀಯರು ಹಜ್ ಯಾತ್ರೆಗೆ ಕಾಯ್ದಿರಿಸಲಾಗಿದ್ದ 52,000 ಸ್ಲಾಟ್ ರದ್ದು ಮಾಡಲಾಗಿದೆ ಎಂದು ವರದಿ ಬಂದಿದ್ದು, ಅದರಲ್ಲಿ ಬಹುತೇಕರು ಈಗಾಗಲೇ ಸಂಪೂರ್ಣ ಹಣ ಪಾವತಿಸಿದ್ದಾರೆ. ಈ ಬಗ್ಗೆ ತೀವ್ರ ಕಳವಳ ಉಂಟಾಗಿದ್ದು, ಇದರ ಪರಿಣಾಮಕ್ಕೊಳಗಾದ ಯಾತ್ರಿಕರ ಹಿತದೃಷ್ಟಿಯಿಂದ ವಿದೇಶಾಂಗ ಸಚಿವ ಜೈ ಶಂಕರ್ ಅವರು ಸೌದಿ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಈ ವರ್ಷ ಹಜ್ ಯಾತ್ರೆ ಕೈಗೊಳ್ಳಲು ಮುಂದಾಗಿರುವ ಸಾವಿರಾರು ಯಾತ್ರಿಕರ ದೃಷ್ಟಿಯಿಂದ ಈ ಕ್ರಮ ಅತ್ಯಂತ ಪ್ರಮುಖವಾದುದ್ದಾಗಿದೆ’ ಎಂದು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಸೌದಿ ಅರೇಬಿಯಾದಿಂದ ವಿಚಲಿತಗೊಳಿಸುವ ಸುದ್ದಿಗಳು ಹೊರಬರುತ್ತಿವೆ. ಭಾರತದ ಖಾಸಗಿ ಹಜ್ ಕೋಟಾದ ಶೇ 80ರಷ್ಟನ್ನು ಹಠಾತ್ತನೆ ಕಡಿತಗೊಳಿಸಲಾಗಿದೆ ಎಂದು ವರದಿಗಳು ಬರುತ್ತಿವೆ. ಈ ಹಠಾತ್ ನಿರ್ಧಾರವು ದೇಶದಾದ್ಯಂತ ಯಾತ್ರಿಕರು ಮತ್ತು ಪ್ರವಾಸ ನಿರ್ವಾಹಕರಿಗೆ ಅಪಾರ ತೊಂದರೆಯನ್ನುಂಟುಮಾಡುತ್ತಿದೆ. ಸೌದಿ ಸರ್ಕಾರದೊಂದಿಗೆ ಈ ವಿಷಯವನ್ನು ಚರ್ಚಿಸುವ ಮೂಲಕ ಪರಿಹಾರವನ್ನು ಪಡೆಯಲು ವಿದೇಶಾಂಗ ಸಚಿವಾಲಯವು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಮುಫ್ತಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.