ಬೆಂಗಳೂರು: ಹರಿಯಾಣ ಮತ್ತು ಕರ್ನಾಟಕದಲ್ಲಿ ತಲಾ ಒಬ್ಬರು ಎಚ್3ಎನ್2 ವೈರಸ್ ಇನ್ಫ್ಲೂಯೇಂಜಾದಿಂದ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಭಾರತದಲ್ಲಿ ಒಟ್ಟು 90 ಎಚ್ 3ಎನ್ 2 ವೈರಸ್ ಪ್ರಕರಣಗಳು ವರದಿಯಾಗಿವೆ. ಎಂಟು ಎಚ್1ಎನ್1 ವೈರಸ್ ಪ್ರಕರಣಗಳನ್ನು ಗುರುತಿಸಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಫ್ಲೂ ಪ್ರಕರಣಗಳು ಅಧಿಕವಾಗಿವೆ. ಹೆಚ್ಚಿನವು ಹಾಂಗ್ ಕಾಂಗ್ ಫ್ಲೂ ಎಂದೂ ಹೇಳಲಾಗುವ ಎಚ್ 3ಎನ್ 2 ವೈರಸ್ ಬಾಧೆಗಳು. ಈ ವೈರಸ್ ಫ್ಲೂ ಸೋಂಕಿತರು ದೇಶದಲ್ಲಿ ಬೇರೆ ಯಾವುದೇ ಫ್ಲೂ ವೈರಸ್ ಬಗೆಯದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಇಲ್ಲಿಯವರೆಗೆ ಭಾರತದಲ್ಲಿ ಎಚ್ 3ಎನ್ 2 ಮತ್ತು ಎಚ್ 1ಎನ್ 1 ಬಗೆಯ ವೈರಸ್ ಫ್ಲೂಗಳು ಮಾತ್ರ ಪತ್ತೆಯಾಗಿವೆ.
ಜಾಗತಿಕವಾಗಿ ಕೋಟಿ ಕೋಟಿ ಜನರನ್ನು ಕಾಡಿ 68 ಲಕ್ಷ ಸಾವುಗಳಿಗೆ ಕಾರಣವಾದ ಕೋವಿಡ್ ಮಾದರಿಯ ನೆಗಡಿ, ಕೆಮ್ಮುಗಳನ್ನು ಎರಡೂ ಬಗೆಯ ಫ್ಲೂಗಳೂ ಹೊಂದಿವೆ. ಎರಡು ವರ್ಷಗಳ ಸಾಂಕ್ರಾಮಿಕ ಬಾಧೆಯ ಬಳಿಕ ಈಗ ವಿಷಮಶೀತ ಜ್ವರದ ಕರಿನೆರಳು ಲೋಕದ ಮೇಲೆ ಬಿದ್ದಿರುವುದು ಆಘಾತಕಾರಿ.
ಕೆಮ್ಮು, ಜ್ವರ, ಚಳಿ, ಉಸಿರುಗಟ್ಟುವುದು, ಉಸಿರೆಳೆಯುವುದು, ನೆಗಡಿ ಇದರ ಮುಖ್ಯ ಲಕ್ಷಣಗಳಾಗಿವೆ. ಕೆಲವು ರೋಗಿಗಳಲ್ಲಿ ವಾಕರಿಕೆ, ಗಂಟಲು ಉರಿಯೂತ, ಮೈಕೈ ನೋವು, ಭೇದಿ ಕೂಡ ಕಾಣಿಸಿಕೊಂಡಿದೆ. ಈ ಚಿಹ್ನೆಗಳೆಲ್ಲ ಒಂದು ವಾರದ ಕಾಲ ಕಾಡಬಲ್ಲವು. ಈ ವೈರಸ್ ಗಳು ವೇಗದ ಸೋಂಕಿನವಾಗಿದ್ದು, ಕೆಮ್ಮು, ಸೀನು, ಬಾಧಿತರ ಸಂಪರ್ಕದಿಂದ ವೇಗವಾಗಿ ಹರಡುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಕೋವಿಡ್’ಗೆ ತೆಗೆದುಕೊಂಡ ಮುನ್ನೆಚ್ಚರಿಕೆಗಳನ್ನೇ ಇದಕ್ಕೆ ತೆಗೆದುಕೊಳ್ಳಬೇಕು. ಆಗಾಗ ಕೈ ತೊಳೆದುಕೊಳ್ಳುವುದು, ಮುಖ ಗವುಸು ಧರಿಸುವುದು ಒಳ್ಳೆಯದು. ಸೀನುವಾಗ, ಕೆಮ್ಮುವಾಗ ಮೂಗು ಬಾಯಿಗಳನ್ನು ಮುಚ್ಚಿಕೊಳ್ಳುವುದರಿಂದ ಲಕ್ಷಾಂತರ ವೈರಾಣುಗಳು ಬೇರೆಯವರತ್ತ ಹರಡುವುದನ್ನು ತಡೆಯಬಹುದು ಎಂದು ಐಸಿಎಂಆರ್- ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಹೇಳಿದೆ. ಜ್ವರ ಮತ್ತು ಮೈ ಕೈ ನೋವಿಗೆ ಪ್ಯಾರಾಸೆಟಮಲ್ ತೆಗೆದುಕೊಳ್ಳುವಂತೆಯೂ ಅದು ಹೇಳಿದೆ.
ಸಣ್ಣ ಮಕ್ಕಳು ಮತ್ತು ವಯಸ್ಸಾದವರಿಗೆ ಇದು ಅಪಾಯಕಾರಿಯಾದುದಾಗಿದೆ. ಅವರ ರೋಗ ನಿರೋಧಕ ಶಕ್ತಿ ಕಡಿಮೆ ಆಗಿರುತ್ತದಾದ್ದರಿಂದ ವೈದ್ಯಕೀಯ ಸಂಕಟಗಳು ಅವರಲ್ಲಿ ಹೆಚ್ಚು ಇರುತ್ತದೆ. ರೋಗ ನಿರ್ಣಯ ಪತ್ತೆ ಆಗದೆ ಆಂಟಿ ಬಯಾಟಿಕ್ ಸೇವಿಸದಂತೆ ತಜ್ಞ ವೈದ್ಯರು ತಿಳಿಸಿದ್ದಾರೆ.