ನವದೆಹಲಿ: ಬಸ್ ಗಳ ಕಿಟಕಿ ಕಂಬಿಗಳ ಮೇಲೆ ಗುಟ್ಕಾದ ಉಗುಳಿದ ಅಸಹ್ಯದ ಚಿತ್ರಗಳು ಸಾಮಾನ್ಯ. ಆದರೆ ವಿಮಾನದಲ್ಲಿ ಇಂತಹ ಗುಟ್ಕಾ ಚಿತ್ತಾರ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿದ್ದಾರೆ.
ವಿಮಾನದ ಕಿಟಕಿ ಬಳಿ ಗುಟ್ಕಾ ಜಗಿದು ಉಗುಳಿದ ಚಿತ್ರವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಅವನೀಶ್ ಶರಣ್ ತಾವು ಪ್ರವಾಸ ಹೊರಟಿದ್ದ ಸಂದರ್ಭದಲ್ಲಿ ಕಿಟಕಿಯ ಚಿತ್ರ ತೆಗೆದು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಕಳೆದ ಕೆಲ ದಿನಗಳಿಂದಲೂ ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಹೀಗೆ ಮಾಡಿದವರು ಯಾರು ಎಂದು ಪತ್ತೆಹೆಚ್ಚಿ, ದುಬಾರಿ ದಂಡ ವಿಧಿಸಬೇಕು’ ಎಂದು ಕೆಲವರು ಬರೆದಿದ್ದಾರೆ.
ಸೂಪರ್ ಸ್ಟಾರ್ ಗಳೇ ತಂಬಾಕು ಉತ್ಪನ್ನಗಳನ್ನು ಶಿಫಾರಸು ಮಾಡುತ್ತಿರುವುದರಿಂದ ಹೆಚ್ಚಿನ ಜನರು ಈ ಅಪಾಯಕಾರಿ ಗುಟ್ಕಾ ಬಳಕೆಗೆ ಮುಂದಾಗುತ್ತಿದ್ದಾರೆ. ಅಂಥ ಸೂಪರ್ ಸ್ಟಾರ್ ಗಳಿಗೆ ಎಚ್ಚರಿಕೆ ನೀಡಬೇಕು’ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.