ನವದೆಹಲಿ: ಹರ್ಯಾಣದ ಗುರ್ಗಾಂವ್ ನಲ್ಲಿ ಸಂಘಪರಿವಾರ ಶುಕ್ರವಾರದ ನಮಾಝ್ ಗೆ ನಿರಂತರ ಅಡ್ಡಿಪಡಿಸುತ್ತಿರುವ ನಡುವೆ ಗುರುದ್ವಾರದಲ್ಲಿ ಪ್ರಾರ್ಥನೆಗೆ ಸಿಖ್ಖರು ಅವಕಾಶ ಕಲ್ಪಿಸುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ. ಸಿಖ್ಖರ ಈ ಕ್ರಮ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಐದು ಗುರುದ್ವಾರ ಗುರು ಸಿಂಗ್ ಸಭಾದ ಅಧೀನದಲ್ಲಿರುವ ಸಿಖ್ಖರ ಧಾರ್ಮಿಕ ಕೇಂದ್ರಗಳನ್ನು ಪ್ರಾರ್ಥನೆ ಸಲ್ಲಿಸಲು ಬಳಸಬಹುದು. ಮಾತ್ರವಲ್ಲ ಗುರುದ್ವಾರಗಳ ಬಾಗಿಲು ಎಲ್ಲಾ ಸಮುದಾಯಗಳಿಗೆ ತೆರೆದಿರುತ್ತದೆ ಎಂದು ಸಭಾದ ಅಧ್ಯಕ್ಷ ಶೆರ್ದಿಲ್ ಸಿಂಗ್ ಸಿಧು ತಿಳಿಸಿದರು. ಶುಕ್ರವಾರದ ನಮಾಝ್ ಗೆ ಸ್ಥಳದ ಕೊರತೆ ಎದುರಿಸುತ್ತಿರುವ ಮುಸ್ಲಿಮರು ನಮಾಝ್ ಗಾಗಿ ಗುರುದ್ವಾರವನ್ನು ಬಳಸಬಹುದೆಂದು ತಿಳಿಸಿದರು.
ಸಭಾದ ಉಪಾಧ್ಯಕ್ಷ ಜೆ.ಪಿ ಸಿಂಗ್ ಮಾತನಾಡಿ, ಇತರ ಸಮುದಾಯಗಳಿಗೆ ಸಹಾಯ ಮಾಡಲು ಸಿಖ್ಖರು ಸದಾ ಸಿದ್ಧವಿದ್ದಾರೆ. ಗುರುದ್ವಾರ ಆವರಣವು ಪ್ರಾರ್ಥನೆ ಸಲ್ಲಿಸಲು ಬಯಸುವವರಿಗೆ ಮುಕ್ತವಾಗಿದೆ ಎಂದು ತಿಳಿಸಿದರು.
ಸದ್ಯ ಐದು ಗುರುದ್ವಾರದಲ್ಲಿ ಸುಮಾರು 2000 ಕ್ಕೂ ಮಿಕ್ಕಿದ ಜನರು ನಮಾಝ್ ನಿರ್ವಹಿಸಬಹುದೆಂದು ಹೇಳಲಾಗಿದೆ.
ಇತ್ತೀಚೆಗೆ ಸಂಘಪರಿವಾರಕ್ಕೆ ಸಡ್ಡು ಹೊಡೆದು ಅಕ್ಷಯ್ ರಾವ್ ಎಂಬಾತ ಮುಸ್ಲಿಮರು ಶುಕ್ರವಾರದ ನಮಾಝ್ ನಿರ್ವಹಿಸಲು ತನ್ನ ಅಂಗಡಿಯ ಮೇಲ್ಛಾವಣಿಯನ್ನು ನೀಡಿ ಗಮನ ಸೆಳೆದಿದ್ದನು.