ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ತನ್ನ ಸಮುದಾಯಕ್ಕೆ ಕರೆ ನೀಡಿದ ಗುಜರಾತ್ ಮಾಲ್ಧಾರಿ ಮಹಾಪಂಚಾಯತ್

ಅಹ್ಮದಾಬಾದ್ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ಗುಜರಾತ್ ಮಾಲ್ಧಾರಿ ಮಹಾಪಂಚಾಯತ್ (ಜಿಎಂಎಂ) ತನ್ನ ಸಮುದಾಯಕ್ಕೆ ಕರೆ ನೀಡಿದೆ.

ಜಿಎಂಎಂ ರಾಜ್ಯದ ಜಾನುವಾರು ಸಾಕಣೆದಾರರ ಒಕ್ಕೂಟ ಸಂಘಟನೆಯಾಗಿದೆ. ಎರಡು ದಿನಗಳ ಹಿಂದೆ ಮೆಹ್ಸಾನಾದಲ್ಲಿ ನಡೆದ ಸಭೆಯಲ್ಲಿ ಜಿಎಂಎಂನ ವಕ್ತಾರ ನಾಗಜಿಭಾಯ್ ದೇಸಾಯಿ ಈ ಹೇಳಿಕೆ ನೀಡಿದ್ದಾರೆ

- Advertisement -

ಆಡಳಿತಾರೂಢ ಬಿಜೆಪಿ ಸರ್ಕಾರವು ತಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಹೇಳಿರುವ  ಅವರು, ಗುಜರಾತ್ ನಾದ್ಯಂತ ಮಾಲ್ಧಾರಿಗಳಿಗೆ ಕಳೆದ ಒಂದೂವರೆ ವರ್ಷದಿಂದ ಕಿರುಕುಳ ನೀಡಲಾಗುತ್ತಿದೆ ಮತ್ತು ಅವರ ವಿರುದ್ಧ ಅನೇಕ ಪ್ರಕರಣಗಳು ಸಹ ದಾಖಲಾಗಿವೆ ಎಂದಿದ್ದಾರೆ. ಬಿಜೆಪಿ ಆಡಳಿತದಲ್ಲಿ ನಮ್ಮ ಬಹುದಿನಗಳ ಬೇಡಿಕೆಗಳು ಇನ್ನೂ ಈಡೇರಿಲ್ಲ. ಆ ಪಕ್ಷಕ್ಕೆ ಪಾಠ ಕಲಿಸಲು, ಈ ಬಾರಿ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಪಂಚಾಯತ್ ನಮ್ಮ ಸಮುದಾಯಕ್ಕೆ ಮನವಿ ಮಾಡುತ್ತದೆ ಎಂದು ಹೇಳಿದ್ದಾರೆ.

ಗುಜರಾತ್ ನ ಕೆಲವು ಭಾಗಗಳಲ್ಲಿ ವಾಸಿಸುತ್ತಿರುವ ಸಮುದಾಯದ ಸುಮಾರು 70 ಲಕ್ಷ ಸದಸ್ಯರಲ್ಲಿ, ಸುಮಾರು 60 ಲಕ್ಷ ಜನರು ಅರ್ಹ ಮತದಾರರಾಗಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಬಿಜೆಪಿ ಸರ್ಕಾರದ ಬಗ್ಗೆ ಸಮುದಾಯವು ತೀವ್ರ ಅಸಮಾಧಾನ ಹೊಂದಿರುವುದರಿಂದ ಅದನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವದಲ್ಲಿ ಮತದಾನದ ಶಕ್ತಿಯನ್ನು ತೋರಿಸುತ್ತೇವೆ ಎಂದು ತಿಳಿಸಿದ್ದಾರೆ.