ಹೊಸದಿಲ್ಲಿ: ಗುಜರಾತ್‌ನಲ್ಲಿ ನಕಲಿ ಮದ್ಯ ದುರಂತ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಾಪೂಜಿ ಹಾಗೂ ಸರ್ದಾರ್ ಅವರ ಭೂಮಿಯಲ್ಲಿ ನಕಲಿ ಮದ್ಯದ ವ್ಯವಹಾರ ಮಾಡುತ್ತಿರುವುದು ಯಾರು? ಯಾವ ಆಡಳಿತ ಶಕ್ತಿಗಳು ನಕಲಿ ಮದ್ಯ ಸೇವನೆ ಹಾಗೂ ಮಾದಕ ವ್ಯಸನ ಮಾಫಿಯಾಗಳಿಗೆ ರಕ್ಷಣೆ ನೀಡುತ್ತಿವೆ ಎಂದು ಪ್ರಶ್ನಿಸಿದ್ದಾರೆ.
ಮದ್ಯ ನಿಷೇಧಿತ ಗುಜರಾತ್‌ನಲ್ಲಿ ನಕಲಿ ಮದ್ಯ ಸೇವನೆಯಿಂದ ಹಲವು ಕುಟುಂಬಗಳು ಅನಾಥವಾಗಿದೆ. ಕೋಟ್ಯಂತರ ಮೌಲ್ಯದ ಡ್ರಗ್ಸ್ ಕೂಡ ನಿರಂತರವಾಗಿ ವಶಕ್ಕೆ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಕಲಿ ಮದ್ಯ ಸೇವಿಸಿ 42 ಜನರು ಮೃತಪಟ್ಟಿದ್ದು, ಭಾವನಗರ, ಬೊಟಾಡ ಹಾಗೂ ಅಹಮದಾಬಾದ್‌ನ ವಿವಿಧ ಆಸ್ಪತ್ರೆಗಳಲ್ಲಿ 97 ಮಂದಿ ದಾಖಲಾಗಿದ್ದಾರೆ ಎಂದು ಗುಜರಾತ್‌ನ ಗೃಹ ಸಚಿವ ಹರ್ಷ ಸಂಘವಿ ತಿಳಿಸಿದ್ದರು.
ಈ ಪ್ರಕರಣದಲ್ಲಿ 15 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.