ಭೂಗತ ಪಾತಕಿ ರವಿ ಪೂಜಾರಿ ಗುಜರಾತ್ ಪೊಲೀಸರ ವಶಕ್ಕೆ

Prasthutha|

ಬೆಂಗಳೂರು; ಭೂಗತ ಪಾತಕಿ ರವಿ ಪೂಜಾರಿಯನ್ನು ವಿಚಾರಣೆಗಾಗಿ‌ಮುಂಬೈ, ಕೇರಳ ಬಳಿಕ ಗುಜರಾತ್ ಪೊಲೀಸರ ವಶಕ್ಕೆ ನೀಡಲಾಗಿದೆ.
ಮೂವತ್ತು ದಿನಗಳ ಕಾಲ ಗುಜರಾತ್ ಎಟಿಎಸ್ ವಶಕ್ಕೆ ನೀಡಿ ನಗರದ 62ನೇ ಸಿಸಿಎಚ್ ಕೋರ್ಟ್ ಆದೇಶ ಹೊರಡಿಸಿದೆ.
ಕಳೆದ ಜನವರಿ 2017ರಲ್ಲಿ ಗುಜರಾತ್‌ನ ಬೊರ್ಸಾದ್​​ನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಕೌನ್ಸಿಲರ್ ಪ್ರಗ್ನೇಶ್ ಪಟೇಲ್ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದ ಪ್ರಕರಣದಲ್ಲಿ ರವಿ ಪೂಜಾರಿ ವಿಚಾರಣೆ ನಡೆಯಲಿದೆ.

- Advertisement -


ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದ ಗುಜರಾತ್ ಎಟಿಎಸ್ ತನಿಖೆಯ ವೇಳೆ ರವಿ ಪೂಜಾರಿಯ ಪಾತ್ರ ಬೆಳಕಿಗೆ ಬಂದಿತ್ತು. ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ನೀಡುವಂತೆ ಗುಜರಾತ್ ಎಟಿಎಸ್ ಮನವಿ ಸಲ್ಲಿಸಿತ್ತು. 30 ದಿನಗಳ ಕಾಲ ಗುಜರಾತ್ ಎಟಿಎಸ್ ವಶಕ್ಕೆ ನೀಡಿ ಬೆಂಗಳೂರಿನ 62ನೇ ಸಿಸಿಎಚ್ ಆದೇಶ ಹೊರಡಿಸಿದೆ.
ಜೈಲಿನಲ್ಲೇ ವಿಚಾರಣೆ: ಕೇರಳದ ಬ್ಯೂಟಿ ಪಾರ್ಲರ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಪೂಜಾರಿಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ವಶಕ್ಕೆ ಪಡೆದು ವಿಚಾರಣೆ ನಡೆಸಲು ಕೇರಳದ ಎರ್ನಾಕುಲಂ ಪೊಲೀಸರಿಗೆ ಫೆಬ್ರವರಿ 18ರಂದು ಕೋರ್ಟ್ ಅನುಮತಿ ನೀಡಿತ್ತು.
ರವಿ ಪೂಜಾರಿಯನ್ನು ವಶಕ್ಕೆ ಪಡೆಯಲು ಅನುಮತಿ ನೀಡುವಂತೆ ಕೋರಿ ಕೇರಳದ ಎರ್ನಾಕುಲಂ ಸಿಸಿಬಿ ವಿಭಾಗದ ಇನ್ಸ್‌ಪೆಕ್ಟರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 65ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಈ ಆದೇಶ ಮಾಡಿತ್ತು.
ತನಿಖಾಧಿಕಾರಿ ವರದಿ: ಎರ್ನಾಕುಲಂ ಸಿಸಿಬಿ ಪೊಲೀಸರು ಆರೋಪಿ ಪೂಜಾರಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೇ ಐದು ದಿನಗಳ ಕಾಲ ಔಪಚಾರಿಕವಾಗಿ ಬಂಧಿಸಿ ವಿಚಾರಣೆ ನಡೆಸಬಹುದು ಎಂದಿತ್ತು.


ಆದರೆ ಈ ಸಂದರ್ಭದಲ್ಲಿ ಆರೋಪಿ ಪರ ವಕೀಲರು ಹಾಗೂ ಕಾರಾಗೃಹದ ಮುಖ್ಯ ಅಧೀಕ್ಷಕರು ಹಾಜರಿರಬೇಕು. ಈ ಸಂಬಂಧ ತನಿಖಾಧಿಕಾರಿ ವರದಿ ಸಿದ್ಧಪಡಿಸಿ ಎರ್ನಾಕುಲಂನ ಸಂಬಂಧಿತ ನ್ಯಾಯಾಲಯಕ್ಕೆ ಸಲ್ಲಿಸಬಹುದು. ಈ ಬಗ್ಗೆ ಆರೋಪಿ ಪರ ವಕೀಲರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.

Join Whatsapp