Home ಟಾಪ್ ಸುದ್ದಿಗಳು ಲವ್ ಜಿಹಾದ್ ಕಾಯ್ದೆಯ ಹಲವು ಸೆಕ್ಷನ್ ಗಳಿಗೆ ತಡೆ ನೀಡಿದ ಗುಜರಾತ್ ಹೈಕೋರ್ಟ್

ಲವ್ ಜಿಹಾದ್ ಕಾಯ್ದೆಯ ಹಲವು ಸೆಕ್ಷನ್ ಗಳಿಗೆ ತಡೆ ನೀಡಿದ ಗುಜರಾತ್ ಹೈಕೋರ್ಟ್

ಗಾಂಧಿನಗರ: ಗುಜರಾತ್ ಸರ್ಕಾರ ಜಾರಿಗೊಳಿಸಿದ ಧಾರ್ಮಿಕ ಸ್ವಾತಂತ್ರ್ಯದ ತಿದ್ದುಪಡಿ ಕಾಯ್ದೆ, 2021 ರ ಹಲವು ಸೆಕ್ಷನ್ ಗಳಿಗೆ ಗುಜರಾತ್ ಹೈಕೋರ್ಟ್ ಗುರುವಾರ ತಡೆ ಹಿಡಿದಿದೆ. ಈ ಕಾಯ್ದೆಯನ್ನು ‘ಲವ್ ಜಿಹಾದ್’ ಕಾಯ್ದೆ ಎಂದೇ ಕರೆಯಲಾಗುತ್ತಿದೆ. ಮಾತ್ರವಲ್ಲ ಹುಡುಗಿಯ ಹೇಳಿಕೆ ಸುಳ್ಳು ಎಂದು ಸಾಬೀತುಪಡಿಸುವವರೆಗೂ ಎಫ್.ಐ.ಆರ್ ದಾಖಲಿಸುವುದನ್ನು ನ್ಯಾಯಾಲಯ ನಿಷೇಧಿಸಿದೆ.

ವಿವಾಹದ ಮೂಲಕ ಬಲವಂತದ ಮತಾಂತರದ ಪ್ರಕರಣದ ವಿರುದ್ಧ ತಿದ್ದುಪಡಿ ಗೊಳಿಸಿದ ಕಾಯ್ದೆಯ ಹಲವು ಸೆಕ್ಷನ್ ಗಳಿಗೆ ನ್ಯಾಯಾಲಯ ತಡೆ ನೀಡಿದೆ. ಅಂತರ್ ಧರ್ಮೀಯ ವಿವಾಹದ ಮೂಲಕ ಬಲವಂತದ ಮತಾಂತರಕ್ಕೆ ಕಾರಣವಾದ ಅಂಶಗಳು ಗೋಚರಿಸದ ಹಿನ್ನೆಲೆಯಲ್ಲಿ ವಿವಿಧ ಸೆಕ್ಷನ್ ಗಳಿಗೆ ತಡೆ ನೀಡಲಾಗಿದೆಯೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ತಿದ್ದುಪಡಿಯಾದ ಕಾನೂನು ವಿವಾಹದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಮಾತ್ರವಲ್ಲದೆ ಯಾವುದೇ ಧರ್ಮವನ್ನು ಪ್ರಚಾರಪಡಿಸುವ ಪ್ರತಿಪಾದಿಸುವ ಮತ್ತು ಆಚರಿಸುವ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 25ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಕಾಯ್ದೆಯ ಸೆಕ್ಷನ್ ಗಳಾದ 3, 4, 4 ಎ, 4 ಬಿ, 4 ಸಿ, 5, 6 ಮತ್ತು 6 ಎ ಗೆ ನ್ಯಾಯಾಲಯ ಗುರುವಾರ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರ ಮಧ್ಯಂತರ ಆದೇಶದ ವಿಭಾಗೀಯ ಪೀಠವು ಈ ಕಾನೂನಿನ ನಿಬಂಧನೆಗಳನ್ನು ಪ್ರಶ್ನಿಸುವ ಹಲವಾರು ಅರ್ಜಿಗಳನ್ನು ವಿಚಾರಣೆ ನಡೆಸಿದೆ.

ಧಾರ್ಮಿಕ ಮತಾಂತರಕ್ಕಾಗಿ ವಿವಾಹ ನಡೆಸಲಾಗಿದೆಯೆಂದು ಅರ್ಜಿದಾರರು ಹೇಗೆ ನಿರ್ಧರಿಸುತ್ತಾರೆ ಎಂಬುವುದರ ಕುರಿತು ಹೈಕೋರ್ಟ್ ಸೂಕ್ಷ್ಮವಾಗಿ ವೀಕ್ಷಣೆ ನಡೆಸಿದೆ ಎಂದು ಅಡ್ವೊಕೇಟ್ ಮುಜಾಹಿದ್ ನಫೀಸ್ ಗುರುವಾರ ಮಾಧ್ಯಮಕ್ಕೆ ತಿಳಿಸಿದರು.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ನ್ಯಾಯಾಲಯದ ಈ ಆದೇಶದ ಹಿನ್ನೆಲೆಯಲ್ಲಿ ಕಾನೂನು ತಜ್ಞರು ಪರಿಶೀಲಿಸಿದ ನಂತರ ಸರ್ಕಾರವು ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ ಎಂದು ತಿಳಿಸಿದರು.

Join Whatsapp
Exit mobile version