►ಡಿಸೆಂಬರ್ 1ಕ್ಕೆ ಮೊದಲ ಹಂತದ ಮತದಾನ, ಡಿಸೆಂಬರ್ 5ಕ್ಕೆ ಎರಡನೇ ಹಂತದ ಮತದಾನ
ನವದೆಹಲಿ: ಬಹು ನಿರೀಕ್ಷಿತ ಗುಜರಾತ್ ವಿಧಾನಸಭೆ ಚುನಾವಣೆಗೆ ಮುಹೂರ್ತ ಪಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗ ಇಂದು ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಎರಡು ಹಂತಗಳಲ್ಲಿ ಗುಜರಾತ್ ಮತದಾನ ನಡೆಯಲಿದೆ.
ಡಿಸೆಂಬರ್ 1 ರಂದು ಮೊದಲ ಚುನಾವಣೆ ನಡೆಯಲಿದ್ದು, ಡಿಸೆಂಬರ್ 5ರಂದು ಎರಡನೇ ಹಾಗೂ ಅಂತಿಮ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ಡಿ. 1 ರಂದು ಮೊದಲ ಹಂತದಲ್ಲಿ 89 ಕ್ಷೇತ್ರಗಳಿಗೆ ಮತ್ತು ಡಿ. 5 ರಂದು ಎರಡನೇ ಹಂತದಲ್ಲಿ 93 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
4.9 ಕೋಟಿ ಮತದಾರರು ಈ ಬಾರಿ ತಮ್ಮ ಹಕ್ಕನ್ನು ಚಲಾಯಿಸಲು ಸಿದ್ಧರಾಗಿದ್ದಾರೆ. 51 ಸಾವಿರ ಮತಗಟ್ಟೆಯಲ್ಲಿ ಮತದಾನದ ಪ್ರಕಿಯೆ ನಡೆಯಲಿದೆ.
182 ಸದಸ್ಯರ ಸಂಖ್ಯಾಬಲದ ಗುಜರಾತ್ ವಿಧಾನಸಭೆಯ ಅವಧಿ ಮುಂದಿನ ವರ್ಷ ಫೆಬ್ರವರಿ 18ಕ್ಕೆ ಕೊನೆಯಾಗಲಿದೆ.
ಮೊದಲ ಹಂತದ ಮತದಾನದಲ್ಲಿ 89 ಕ್ಷೇತ್ರಗಳಲ್ಲಿ ಹಾಗೂ ಎರಡನೆಯ ಹಂತದಂದು 93 ಕ್ಷೇತ್ರಗಳಿಗೆ ಎಂದು ಗುಜರಾತಿನ ಒಟ್ಟು 182 ವಿದಾನ ಸಭಾ ಕ್ಷೇತ್ರಗಳ ಚುನಾವಣೆ ನಡೆಯುತ್ತದೆ.
34,000 ಗ್ರಾಮೀಣ ಪ್ರದೇಶಗಳ ಮತದಾನ ಕೇಂದ್ರಗಳ ಸಹಿತ ರಾಜ್ಯದಲ್ಲಿ ಒಟ್ಟು 51,000 ಮತದಾನ ಕೇಂದ್ರಗಳು ಇರುತ್ತವೆ ಎಂದೂ ಘೋಷಿಸಲಾಗಿದೆ.
ಮುಖ್ಯ ಚುನಾವಣಾ ಆಯುಕ್ತರು ಚುನಾವಣಾ ದಿನಾಂಕ ಘೋಷಣೆ ಮಾಡುವುದಕ್ಕೆ ಮೊದಲು ಮೊರ್ಬಿ ಸೇತುವೆ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 135ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಸೇತುವೆ ದುರಂತದ ಕಾರಣಕ್ಕೆ ಚುನಾವಣಾ ದಿನಾಂಕ ಘೋಷಣೆಯು ಎರಡು ದಿನ ತಡವಾಯಿತು ಎಂದೂ ಅವರು ಹೇಳಿದರು.
ಗುಜರಾತ್ ವಿಧಾನ ಸಭೆಯು ಫೆಬ್ರವರಿ 18, 2023ಕ್ಕೆ ಕೊನೆಗೊಳ್ಳುತ್ತದೆ. ಇಂದಿನಿಂದಲೇ , ಈಗಿನಿಂದಲೇ ಗುಜರಾತಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ ಎಂದೂ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು. ಚುನಾವಣಾ ಸಂಬಂಧ ಕೇಂದ್ರ ಸರಕಾರವು ರಾಜ್ಯದಲ್ಲಿ ಸಿಎಪಿಆರ್- ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ 160 ಕಂಪೆನಿಗಳನ್ನುರಾಜ್ಯದಲ್ಲಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಸದಾ ಬಿಜೆಪಿ, ಕಾಂಗ್ರೆಸ್ ನಡುವಣ ಹೋರಾಟದ ಗುಜರಾತಿನಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ನಡುವೆ ತ್ರಿಕೋಣ ಚುನಾವಣಾ ಪೈಪೋಟಿ ಇರುವುದಾಗಿ ವ್ಯಾಖ್ಯಾನಿಸಲಾಗಿದೆ. ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಗುಜರಾತಿನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ತನ್ನ ರಾಜ್ಯವಾದ ಗುಜರಾತಿನಲ್ಲಿ ಪ್ರಧಾನಿ ಮೋದಿಯವರು ಈಗಾಗಲೇ ಪ್ರವಾಸ ಆರಂಭಿಸಿದ್ದಾರೆ.
2017ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 99, ಕಾಂಗ್ರೆಸ್ 77 ಸ್ಥಾನಗಳನ್ನು ಮತ್ತು ಕ್ರಮವಾಗಿ 49.05% ಮತ್ತು 42.97% ಮತಗಳನ್ನು ಪಡೆದಿದ್ದವು. ಈ ನಡುವೆ ಕಾಂಗ್ರೆಸ್ಸಿನ ಹಲವರು ಬಿಜೆಪಿ ಸೇರಿದ್ದಾರೆ. ಈಗ ವಿಧಾನ ಸಭೆಯಲ್ಲಿ ಬಿಜೆಪಿ ಬಲ 111 ಮತ್ತು ಕಾಂಗ್ರೆಸ್ ಸಂಖ್ಯೆ 62.