Home ಟಾಪ್ ಸುದ್ದಿಗಳು ಗುಜರಾತ್ ಚುನಾವಣೆ | 1621 ಅಭ್ಯರ್ಥಿಗಳ ಪೈಕಿ 330 ಮಂದಿ ಕ್ರಿಮಿನಲ್ ಹಿನ್ನೆಲೆಯವರು: ADR

ಗುಜರಾತ್ ಚುನಾವಣೆ | 1621 ಅಭ್ಯರ್ಥಿಗಳ ಪೈಕಿ 330 ಮಂದಿ ಕ್ರಿಮಿನಲ್ ಹಿನ್ನೆಲೆಯವರು: ADR

ಅಹಮದಾಬಾದ್: ಮುಂದಿನ ತಿಂಗಳು ನಡೆಯಲಿರುವ ಗುಜರಾಜ್ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ 1621 ಅಭ್ಯರ್ಥಿಗಳ ಪೈಕಿ 330 ಮಂದಿಯ ಅಥವಾ ಶೇಕಡಾ 20 ರಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸಂಸ್ಥೆ ವರದಿ ಮಾಡಿದೆ.

ಆ ಪೈಕಿ 61 ಅಭ್ಯರ್ಥಿಗಳು ಆಮ್ ಆದ್ಮಿ ಪಕ್ಷ (ಎಎಪಿ) ಪಕ್ಷದ್ದಾಗಿದ್ದು, ಅದು ಅಗ್ರಸ್ಥಾನದಲ್ಲಿದೆ ಎಂದು ಸಂಸ್ಥೆ ತಿಳಿಸಿದೆ.

2017ರ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ 238 ರಷ್ಟಿತ್ತು.

ADR ನಡೆಸಿದ ಸಮೀಕ್ಷೆಯ ಬಳಿಕ ಎರಡು ಹಂತಗಳಲ್ಲಿ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ಈ ಪೈಕಿ ಕಾಂಗ್ರೆಸ್‌ನ 60, ಆಡಳಿತಾರೂಢ ಬಿಜೆಪಿಯ 32 ಅಭ್ಯರ್ಥಿಗಳು ಕ್ರಿಮಿನಲ್ ಗಳು ಎಂದು ಅದು ವರದಿಯಲ್ಲಿ ಉಲ್ಲೇಖಿಸಿದೆ.

ಕಾಂಗ್ರೆಸ್, ಬಿಜೆಪಿ ಮತ್ತು ಎಎಪಿಯ 96 ಮಂದಿ ಸೇರಿದಂತೆ ಒಟ್ಟು 192 ಅಭ್ಯರ್ಥಿಗಳು ಕೊಲೆ, ಅತ್ಯಾಚಾರ ಮತ್ತು ಕೊಲೆಯತ್ನಕ್ಕೆ ಸಂಬಂಧಿಸಿದ ಗಂಭೀರ ಅಪರಾಧ ಪ್ರಕರಣ ಹೊಂದಿದವರಾಗಿದ್ದಾರೆ ಎಂದು ಎಡಿಆರ್ ತಿಳಿಸಿದೆ.

ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ 18 ಅಭ್ಯರ್ಥಿಗಳನ್ನು ಹೆಸರಿಸಲಾಗಿದ್ದು, ಒಬ್ಬ ಅಭ್ಯರ್ಥಿಯ ಮೇಲೆ ಅತ್ಯಾಚಾರದ ಆರೋಪವಿದೆ. ಐವರ ಮೇಲೆ ಕೊಲೆ ಆರೋಪಗಳಿವೆ ಮತ್ತು 20 ಅಭ್ಯರ್ಥಿಗಳ ಮೇಲೆ ಕೊಲೆಗೆ ಯತ್ನಿಸಿದ ಆರೋಪಗಳಿವೆ ಎಂದು ವರದಿ ಬಹಿರಂಗಪಡಿಸಿದೆ.

Join Whatsapp
Exit mobile version