Home ಟಾಪ್ ಸುದ್ದಿಗಳು ಗುಜರಾತ್ ಸೇತುವೆ ಕುಸಿತ: ಮೃತರ ಸಂಖ್ಯೆ 135ಕ್ಕೆ ಏರಿಕೆ

ಗುಜರಾತ್ ಸೇತುವೆ ಕುಸಿತ: ಮೃತರ ಸಂಖ್ಯೆ 135ಕ್ಕೆ ಏರಿಕೆ

ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಕೇಂದ್ರ- ರಾಜ್ಯ ಸರಕಾರ

ಗಾಂಧಿನಗರ: ಪಶ್ಚಿಮ ಗುಜರಾತ್ ನ ಮೊರ್ಬಿ ತೂಗು ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 135 ಕ್ಕೇರಿದೆ. ಈ ವರೆಗೆ 185 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಮತ್ತಷ್ಟು ಜನರು ನಾಪತ್ತೆಯಾಗಿದ್ದು, ಮುಂದಿನ 24 ಗಂಟೆ ವರೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗುವುದು. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ ಡಿಆರ್ ಎಫ್), ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್ ಡಿಆರ್ ಎಫ್), ಅಗ್ನಿಶಾಮಕ ದಳ, ಮುಳುಗು ತಜ್ಞರು ಸೇರಿದಂತೆ 200ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ದುರಂತದ ಸ್ಥಳದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಚೆಕ್ ಡ್ಯಾಂ ತೆರೆಯಲಾಗಿದೆ. ನೀರಿನ ಮಟ್ಟ ಕಡಿಮೆಯಾದರೆ, ಕಾರ್ಯಾಚರಣೆಗೆ ಅನುಕೂಲವಾಗುತ್ತದೆ. ಮುಂದಿನ 24ಗಂಟೆ ವರೆಗೆ ಶೋಧ ಕಾರ್ಯಾಚರಣೆ ಮುಂದುವರಿಸಬೇಕಾಗಬಹುದು ಎಂದು ರಾಜ್ ಕೋಟ್ ಜಿಲ್ಲಾಧಿಕಾರಿ ಅರುಣ್ ಮಹೇಶ್ ಬಾಬು ಮಾಹಿತಿ ನೀಡಿದ್ದಾರೆ.

ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಮೊರ್ಬಿ ಪಟ್ಟಣದಲ್ಲಿ ಸೋಮವಾರ ಸ್ವಯಂಪ್ರೇರಿತ ಬಂದ್ ಆಚರಿಸಲಾಗುವುದು.

ಮೃತರ ಕುಟುಂಬಕ್ಕೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ 2 ಲಕ್ಷ ರೂ., ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನಿಮಂತ್ರಿ ಘೋಷಿಸಿದ್ದಾರೆ. ಗುಜರಾತ್ ರಾಜ್ಯ ಸರ್ಕಾರವೂ ಮೃತರ ಕುಟುಂಬಕ್ಕೆ 4 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

Join Whatsapp
Exit mobile version