Home ಟಾಪ್ ಸುದ್ದಿಗಳು ಗ್ಯಾರಂಟಿಗಳಿಂದ ಕರ್ನಾಟಕ ಆರ್ಥಿಕ ವಿನಾಶ: ಪ್ರಧಾನಿ ಮೋದಿ

ಗ್ಯಾರಂಟಿಗಳಿಂದ ಕರ್ನಾಟಕ ಆರ್ಥಿಕ ವಿನಾಶ: ಪ್ರಧಾನಿ ಮೋದಿ

ರಾಂಚಿ: ‘ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಗ್ಯಾರಂಟಿಗಳನ್ನು ಘೋಷಿಸಬೇಕು. ಕಾರ್ಯ ಸಾಧುವಲ್ಲದ ಗ್ಯಾರಂಟಿಗಳು ದಿವಾಳಿಗೆ ಕಾರಣ ಆಗಬಹುದು’ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಮತ್ತೊಮ್ಮೆ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ನ ಗ್ಯಾರಂಟಿಗಳಿಂದಾಗಿ ಕರ್ನಾಟಕದಂತಹ ರಾಜ್ಯಗಳು ಆರ್ಥಿಕವಾಗಿ ವಿನಾಶವಾಗಿವೆ ಎಂದಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆ ಅಂಗವಾಗಿ ಗಢವಾ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಭೆಯಲ್ಲಿ ಮಾತನಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಿಂದಲೂ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಲೇ ಬಂದಿದೆ. ಜೊತೆಗೆ, ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳನ್ನು ನೀಡುತ್ತದೆ ಎಂಬುದನ್ನು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಒಪ್ಪಿಕೊಂಡಿದ್ದಾರೆ’ ಎಂದರು.


“ಕಾಂಗ್ರೆಸ್ ನ ಕಾರ್ಯಸಾಧುವಲ್ಲದ ಚುನಾವಣಾ ಗ್ಯಾರಂಟಿಗಳು ಹೇಗೆ ರಾಜ್ಯಗ ಳನ್ನು ದಿವಾಳಿ ಮಾಡಬಲ್ಲದು ಎಂಬ ಸತ್ಯ ವನ್ನು ಖರ್ಗೆ ಹೇಗೆ ಬಹಿರಂಗವಾಗಿ ಹೇಳಿದರು ಎಂದು ನನಗೆ ಅಚ್ಚರಿಯಾಗುತ್ತಿದೆ. ಕಾಂಗ್ರೆಸ್ ನ ಇಂಥ ಘೋಷಣೆಗಳಿಂದಾಗಿಯೇ ಇಂದು ಹಿಮಾಚಲ, ತೆಲಂಗಾಣ ಮತ್ತು ಕರ್ನಾಟಕದಂಥ ರಾಜ್ಯಗಳು ಆರ್ಥಿಕವಾಗಿ ವಿನಾಶವಾಗಿವೆ’ ಎಂದು ಮೋದಿ ಆರೋಪಿಸಿದರು.


ಇನ್ನು ಕಾಂಗ್ರೆಸ್ ನ ಗ್ಯಾರಂಟಿಗಳನ್ನು ಟೀಕಿಸಿದ ಬಳಿಕ ಮೋದಿ ಅವರು, ‘ಸೌಲಭ್ಯ, ಸುರಕ್ಷೆ, ಸ್ಥಿರತೆ, ಸಮೃದ್ಧಿ ಇವು ಮೋದಿ ನೀಡುವ ಗ್ಯಾರಂಟಿಗಳು’ ಎಂದರು ಹಾಗೂ ಜಾರ್ಖಂಡ್ ನಲ್ಲಿ ಬಿಜೆಪಿ ಗೆದ್ದರೆ ಮಹಿಳೆಯರಿಗೆ ಮಾಸಿಕ 2100 ರು. 500 ರು.ಗೆ ಸಿಲಿಂಡರ್, ವರ್ಷಕ್ಕೆ 2 ಉಚಿತ ಸಿಲಿಂಡರ್, ಯುವಕರಿಗೆ 2000 ರು. ನಿರುದ್ಯೋಗ ಭತ್ಯೆ ನೀಡುವ ಪ್ರಣಾಳಿಕೆಯ ಪುನರುಚ್ಚರಿಸಿದರು.

Join Whatsapp
Exit mobile version