Home ಟಾಪ್ ಸುದ್ದಿಗಳು ಅಗತ್ಯ ವಸ್ತುಗಳಿಗೆ ಜಿಎಸ್ ಟಿ ಹೆಚ್ಚಳ; ಜನಸಾಮಾನ್ಯರಿಗೆ ಸರ್ಕಾರದ ಉಡುಗೊರೆ: ಡಿಕೆಶಿ ವ್ಯಂಗ್ಯ

ಅಗತ್ಯ ವಸ್ತುಗಳಿಗೆ ಜಿಎಸ್ ಟಿ ಹೆಚ್ಚಳ; ಜನಸಾಮಾನ್ಯರಿಗೆ ಸರ್ಕಾರದ ಉಡುಗೊರೆ: ಡಿಕೆಶಿ ವ್ಯಂಗ್ಯ

ಬೆಂಗಳೂರು: ಅಗತ್ಯ ವಸ್ತುಗಳಿಗೆ ಜಿಎಸ್ ಟಿ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಉಡುಗೊರೆ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ನಾನು ಬೇಕಂತಲೇ ಈ ವಿಚಾರವಾಗಿ ಮಾತನಾಡುತ್ತಿಲ್ಲ. ರಾಷ್ಟ್ರಪತಿ ಚುನಾವಣೆ ಮುಗಿಯಲಿ. ಹಾಲು, ಮೊಸರುಗಳಿಗೆ ಎಷ್ಟು ಕತ್ತರಿ ಬಿದ್ದಿದೆ ಎಂದು ಜನರಿಗೆ ಅರ್ಥವಾಗಬೇಕು. ಇದು ಜನಸಾಮಾನ್ಯರಿಗೆ ಸರ್ಕಾರದ ಉಡುಗೊರೆ. 8 ವರ್ಷಗಳ ಆಡಳಿತದ ಉಡುಗೊರೆ ‘ ಎಂದು ತಿಳಿಸಿದರು.
‘ ಸರ್ಕಾರ ಬಡವರ ಆದಾಯ ಹೆಚ್ಚಿಸದೇ ಬೆಲೆ ಏರಿಕೆ ಮಾಡಿದ್ದಾರೆ. ಜನಸಾಮಾನ್ಯರ ಆದಾಯ ಎಲ್ಲಿ ಹೆಚ್ಚಾಗಿದೆ? ರೈತರು, ಖಾಸಗಿ ಉದ್ಯೋಗಿಗಳಿಗೆ ಆದಾಯ ಡಬಲ್ ಆಗಿಲ್ಲ. ಆದರೆ ವೆಚ್ಚ ಮಾತ್ರ ಡಬಲ್ ಆಗಿದೆ. ಮುಂದೆ ಈ ಬಗ್ಗೆ ವಿವರವಾಗಿ ಮಾತನಾಡುತ್ತೇನೆ ‘ ಎಂದು ತಿಳಿಸಿದರು.


‘ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ವತಿಯಿಂದ ಯಶ್ವಂತ್ ಸಿನ್ಹಾ ಅವರನ್ನು ಕಣಕ್ಕಿಳಿಸಲಾಗಿದೆ. ಅವರು ಅನುಭವಿ ನಾಯಕರು, ಮಾಜಿ ಆರ್ಥಿಕ ಸಚಿವರೂ ಆಗಿದ್ದಾರೆ. ಅವರು ಸಮಾಜದ ಎಲ್ಲ ವರ್ಗಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ವಿಶ್ವಾಸವಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಆರ್ಥಿಕತೆ ಉಳಿಸಲು, ಜನರ ಧ್ವನಿ ರಕ್ಷಿಸಲು ಯಶವಂತ್ ಸಿನ್ಹಾ ಅವರು ಸೂಕ್ತ ವ್ಯಕ್ತಿ. ಹೀಗಾಗಿ ಅವರಿಗೆ ಪ್ರಜ್ಞಾವಂತ ಮತವನ್ನು ಹಾಕಲು ಎಲ್ಲರಲ್ಲೂ ಮನವಿ ಮಾಡಿದ್ದೇವೆ ಎಂದರು.
ದ್ರೌಪದಿ ಮುರ್ಮು ಅವರು ಕೇವಲ ಬಿಜೆಪಿಯ ಕೈಗೊಂಬೆಯಾಗಲಿದ್ದಾರೆ ಎಂಬ ಆರೋಪ ಕುರಿತು ಕೇಳಿದ ಪ್ರಶ್ನೆಗೆ, ‘ ಆ ಬಗ್ಗೆ ನಾನು ಮಾತನಾಡುವುದಿಲ್ಲ. ಆಡಳಿತ ಪಕ್ಷ ಅವರನ್ನು ಕಣಕ್ಕಿಳಿಸಿದೆ. ಇದು ರಾಜಕೀಯ ಹೋರಾಟ. ಏನಾಗುತ್ತದೆ ಎಂದು ಕಾದು ನೋಡೋಣ ‘ ಎಂದು ತಿಳಿಸಿದರು.

ಎನ್ ಡಿಎ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಕಳೆದ ಬಾರಿ ಪ್ರತಿಭಾ ಪಾಟೀಲ್ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಕಣಕ್ಕಿಳಿಸಿದಾಗ ಜೆಡಿಎಸ್ ಮತ ಹಾಕಲಿಲ್ಲ. ಈಗ ಅವರು ಎನ್ ಡಿಎ ಅಭ್ಯರ್ಥಿ ಪರ ಮತ ಹಾಕುತ್ತಿದ್ದಾರೆ’ ಎಂದರು.

ಮುಖ್ಯಮಂತ್ರಿ ಅವಕಾಶದ ಬಗ್ಗೆ ನಿನ್ನೆ ತಾವು ನೀಡಿರುವ ಹೇಳಿಕೆ ಕುರಿತು ಈಶ್ವರಪ್ಪ ಅವರು ಟೀಕಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ನಾನು ಸನ್ಯಾಸಿ ಅಲ್ಲ. ನನಗೆ ಬೇಕಾದವರ ಬಳಿ, ಆಪ್ತರ ಬಳಿ ನಮ್ಮ ಇಂಗಿತ ವ್ಯಕ್ತಪಡಿಸುತ್ತೆವೆ. ಜನ ಮತ ಹಾಕಬೇಕು, ಸರ್ಕಾರ ರಚನೆ ಮಾಡಬೇಕು. ನಾವು ಏನಾದರೂ ಹೇಳಿಕೊಳ್ಳುತ್ತೇವೆ, ಅವರಿಗೆ ಸಂಕಟವೇನು?’ ಎಂದು ಕೇಳಿದರು.

ಪಿಎಸ್ಐ ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ. ಅಗತ್ಯ ಬಿದ್ದರೆ ಎಡಿಜಿಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗುವುದು ಎಂಬ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಕೇವಲ ಎಡಿಜಿಪಿ ಮಾತ್ರವಲ್ಲ, ಬಂಧಿತ ಎಲ್ಲ ಆರೋಪಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಅಭ್ಯರ್ಥಿಗಳಿಗೆ ಹಣ ಎಲ್ಲೆಲ್ಲಿ ಹರಿದು ಹೋಗಿದೆ ಎಂಬ ಮಾಹಿತಿ ಇದೆ. ಯಾವ ಸಚಿವರು, ಅಧಿಕಾರಿಗಳು ಹಣ ಪಡೆದಿದ್ದಾರೆ ಎಂದು ತಿಳಿದಿದೆ.

ಎಡಿಜಿಪಿಯ ಹೇಳಿಕೆಯನ್ನು ಸೆಕ್ಷನ್ 164 ಪ್ರಕಾರ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಯಾಕೆ ದಾಖಲಿಸುತ್ತಿಲ್ಲ ಏಕೆ?’ ಎಂದು ಪ್ರಶ್ನಿಸಿದರು.

Join Whatsapp
Exit mobile version