ಮಂಗಳೂರು: ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಕಟ್ಟೆಯಲ್ಲಿ ಭಿನ್ನ ಉದ್ದೇಶಗಳಿಗೆ ಪ್ರತಿಭಟನೆ ನಡೆಸಲು ಜಮಾಯಿಸಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
ಕಾವಳಮೂಡೂರು ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಕಾವಳಮೂಡೂರು ಗ್ರಾ.ಪಂ. ನೀರು ಹಾಗೂ ಮನೆ ತೆರಿಗೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ತಳ್ಳಾಟ ನಡೆಸಿ ಧಿಕ್ಕಾರ ಕೂಗಲು ಪ್ರಾರಂಭಿಸಿದ್ದು, ಪೊಲೀಸರು ಲಾಟಿ ಬೀಸಿ ಉಭಯ ಪಕ್ಷಗಳ ಕಾರ್ಯಕರ್ತರನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಇದೇ ವೇಳೆ ಆರ್.ಟಿ.ಐ.ಕಾರ್ಯಕರ್ತ ಪದ್ಮನಾಭ ಮಯ್ಯ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪುಂಜಾಲಕಟ್ಟೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.