ಸ್ಮಶಾನ, ದೇವಸ್ಥಾನ ನೆಲಸಮ: ಪ್ರತಿಭಟನೆಗಿಳಿದ ದಲಿತ ಸಂಘಟನೆ

Prasthutha|

ಕೆ.ಆರ್.ಪುರ: ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ ಭೋಗನಹಳ್ಳಿ ಗ್ರಾಮದಲ್ಲಿ ಸ್ಮಶಾನ ಹಾಗೂ ದೇವಾಲಯವನ್ನು ನೆಲಸಮ ಮಾಡಿ ಆ ಜಾಗವನ್ನು ಆದರ್ಶ ಡೆವಲಪರ್ಸ್‌ನವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಬಿಬಿಎಂಪಿ ಮಹದೇವಪುರ ವಲಯ ಕಚೇರಿ ಎದುರು ಪ್ರತಿಭಟನೆ ನಡೆಸಿದೆ.

- Advertisement -

ವರ್ತೂರು ಹೋಬಳಿ ಭೋಗನಹಳ್ಳಿ ಗ್ರಾಮದ ಸರ್ವೇ 33/1 ರಲ್ಲಿ 1 ಎಕರೆ 39 ಗುಂಟೆ ಜಾಗದಲ್ಲಿ ಸ್ಮಶಾನ ಇದ್ದು, ಅಲ್ಲಿ ಚಿಕ್ಕದಾದ ಶ್ರೀಅಂಗಳ ಪರಮೇಶ್ವರಿ ದೇವಾಲಯ ಇತ್ತು. ಗ್ರಾಮಸ್ಥರು ಶವ ಸಂಸ್ಕಾರದ ಸಂದರ್ಭದಲ್ಲಿ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ವಿಧಿ ವಿಧಾನಗಳು ನಡೆಸುತ್ತಿದ್ದರು. ಈಗ ಆದರ್ಶ ಡೆವಲಪರ್ಸ್‌ನವರು ಇದೇ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಮಶಾನ ಮತ್ತು ದೇವಾಲಯ ನೆಲಸಮ ಮಾಡಿರುವ ಕುರಿತು ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದೆವು. ತಹಶೀಲ್ದಾರ್ ಅವರು ಸ್ಥಳದ ಸರ್ವೆ ನಡೆಸಲು ಆದೇಶಿಸಿದ್ದರು. ನಂತರ ಸರ್ವೆ ಪ್ರಕಾರ ಈ ಜಾಗ ಸ್ಮಶಾನಕ್ಕೆ ಸೇರಿದೆ ಎಂದು ನಾಮಫಲಕ ಹಾಕಿಸಿದ್ದರು. ಆದರ್ಶ ಡೆವಲಪರ್ಸ್‌ನವರು ನಾಮಫಲಕವನ್ನು ಕಿತ್ತು ಎಸೆದು ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಜಾಗವನ್ನು ಸ್ಮಶಾನಕ್ಕೆ ಮೀಸಲಿಟ್ಟು ಕಾಂಪೌಂಡ್ ನಿರ್ಮಿಸಬೇಕು ಎಂದು ಆಗ್ರಹಿಸಿದರು..



Join Whatsapp