Home ಟಾಪ್ ಸುದ್ದಿಗಳು ಕನಿಷ್ಟ ವೇತನ ಪರಿಷ್ಕರಣೆ, ಬಾಕಿ ಪಾವತಿಗೆ ಗ್ರಾಪಂ ನೌಕರರ ಒತ್ತಾಯ; ಕಾರ್ಮಿಕ ಇಲಾಖೆ ಕಚೇರಿ ಎದುರು...

ಕನಿಷ್ಟ ವೇತನ ಪರಿಷ್ಕರಣೆ, ಬಾಕಿ ಪಾವತಿಗೆ ಗ್ರಾಪಂ ನೌಕರರ ಒತ್ತಾಯ; ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ

ಹಾಸನ: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುವ ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಠ ವೇತನ ಪರಿಷ್ಕರಣೆ ಮಾಡುವಂತೆ ಹಾಗೂ ಗ್ರಾಮ ಪಂಚಾಯತಿ ನೌಕರರಿಗೆ ಬಾಕಿ ವೇತನ ಮತ್ತು ಗ್ರಾಚ್ಯುಟಿ ಪಾವತಿಸದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಬಾಕಿ ವೇತನ ಮತ್ತು ಗ್ರಾಚ್ಯುಟಿಯನ್ನು ದಂಡ ಸಹಿತವಾಗಿ ಪಾವತಿಸಲು  ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮ ಪಂಚಾಯತಿ ನೌಕರರು ಹಾಸನ ಉಪ ಕಾರ್ಮಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನಗರದ ಅರಳೀಕಟ್ಟೆ ವೃತ್ತದ ಬಳಿ ಇರುವ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಪ್ರತಿಭಟಿಸಿದ ಗ್ರಾಪಂ ನೌಕರರನ್ನು ಉದ್ದೇಶಿಸಿ ಮತನಾಡಿದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಧರ್ಮೇಶ್, ಕರ್ನಾಟಕ ರಾಜ್ಯದ ಗ್ರಾಮ ಪಂಚಾಯತಿಗಳ ನೌಕರರಾದ ಬಿಲ್ ಕಲೆಕ್ಟರ್,   ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್, ವಾಟರ್ ಮ್ಯಾನ್, ಸ್ವೀಪರ್ ಇತ್ಯಾದಿ ನೌಕರರಿಗೆ  2021 ರ ನವೆಂಬರ್ 29 ರಂದು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ವೇತನ ಪರಿಷ್ಕರಿಸಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.

ಈ ಕರಡು ಅಧಿಸೂಚನೆಯಲ್ಲಿ ಬಿಲ್ ಕಲೆಕ್ಟರ್, ಗುಮಾಸ್ತ, ಕ್ಲರ್ಕ್, ಕಂ ಡಾಟಾ ಎಂಟ್ರಿ ಅಪರೇಟರ್ಗಳಿಗೆ 15,196 ರೂ, ವಾಟರ್ಮ್ಯಾನ್, ಪಂಪ್ ಆಪರೇಟರ್ಗಳಿಗೆ 13,509 ರೂ ಅಟೆಂಡರ್ಗಳಿಗೆ 12,873 ರೂಗಳು ಮತ್ತು ಸ್ವೀಪರ್  ಗಳಿಗೆ 16,019 ರೂಗಳ ಕನಿಷ್ಟ ವೇತನ ನಿಗದಿಪಡಿಸಲಾಗಿದೆ.  ಹಣದುಬ್ಬರ ಶೇ.7.8ರಷ್ಟಾಗಿದ್ದು, ಅಗತ್ಯ ವಸ್ತುಗಳ ಬೆಲೆಗಳೆಲ್ಲಾ ಹೆಚ್ಚಾಗಿ ಜೀವನ ದುಸ್ತರವಾಗಿದೆ. ಕನಿಷ್ಟ ವೇತನ ನಿಗದಿ ಮಾಡಲು ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳ ಅನುಸಾರ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಶಿಫಾರಸ್ಸು ಹಾಗೂ ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು..

 ಸರ್ಕಾರದ ಸ್ಪಷ್ಟವಾದ ಆದೇಶವಿದ್ದರೂ ಹಾಸನ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಮತ್ತು ಕರ್ತವ್ಯದಲ್ಲಿದ್ದಾಗಲೇ ನಿಧನರಾದ ಬಹುತೇಕ ಗ್ರಾ.ಪಂ. ನೌಕರರಿಗೆ ಕಾನೂನಿನನ್ವಯ ಗ್ರಾಚ್ಯುಟಿ ಪಾವತಿಸಿಲ್ಲ.  ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ತಾಲ್ಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಾನೂನುಬದ್ಧವಾದ ನೋಟೀಸು ಜಾರಿಮಾಡಿ ಕಾನೂನಿನಂತೆ ಕ್ರಮ ಕೈಗೊಂಡು ಗ್ರಾ.ಪಂ.ಗಳಲ್ಲಿ ನಿವೃತ್ತಿಗೊಂಡ ನೌಕರರಿಗೆ ಮತ್ತು ಮೃತ ನೌಕರರ ಕುಟುಂಬದವರಿಗೆ ದಂಡ ಸಹಿತವಾಗಿ ಗ್ರಾಚ್ಯುಟಿ ಪಾವತಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

   ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೆಗೌಡ, ಜಿಲ್ಲಾ ಖಜಾಂಚಿ ಕುಮಾರಸ್ವಾಮಿ, ಅರವಿಂದ್ ಇತರರು ಉಪಸ್ಥಿತರಿದ್ದರು.

Join Whatsapp
Exit mobile version