ಮಂಗಳೂರು: ನಗರದ ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ಪದವಿ ಪ್ರದಾನ ಕಾರ್ಯಕ್ರಮ ಎಪ್ರಿಲ್ 2ರಂದು ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಫಾ.ರಿಚರ್ಡ್ ಅಲೋಶಿಯಸ್ ಕುವೆಲೋ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭುವನೇಶ್ವರ ಎಐಐಎಂಎಸ್‌ನ ಮಾಜಿ ನಿರ್ದೇಶಕಿ ಡಾ.ಗೀತಾಂಜಲಿ ಭಟ್ಮನಾಬಾನೆ, ಕರ್ನಾಟಕ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು ಬಿಷಪ್ ರೆ.ಡಾ.ಪೀಟರ್ ಪೌಲ್ ಸಲ್ದಾನ್ಹ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಎಂಬಿಬಿಎಸ್‌ನ 147 ಪದವೀಧರರು, ಪಿಜಿ ಮತ್ತು ಡಿಪ್ಲೊಮಾದ 82, ಪಿಎಚ್‌ಡಿ 1, ಮಾಸ್ಟರ್ ಆಫ್ ಫಿಸಿಯೊಥೆರಪಿ 8, ಬ್ಯಾಚುಲರ್ ಆಫ್ ಫಿಸಿಯೊಥೆರಪಿ 41, ಎಂಎಸ್ಸಿ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ 11, ಮಾಸ್ಟರ್ಸ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್ 23, ಬಿಎಸ್ಸಿ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ 31, ಬಿಎಸ್ಸಿ ರೇಡಿಯೊಥೆರಪಿ 7, ಬಿಎಸ್ಸಿ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ 24 ಪದವೀಧರರು ಸೇರಿದಂತೆ ಒಟ್ಟು 615 ಮಂದಿಗೆ ಪದವಿ ಪ್ರದಾನ ನೆರವೇರಿಸಲಾಗುವುದು ಎಂದು ಫಾ.ರಿಚರ್ಡ್ ತಿಳಿಸಿದರು.
142 ವರ್ಷಗಳ ಇತಿಹಾಸ ಇರುವ ಫಾ.ಮುಲ್ಲರ್ ಆಸ್ಪತ್ರೆಯಲ್ಲಿ ಕಳೆದ ವರ್ಷ ನಿರ್ಗತಿಕರು, ಬಡವರು ಸೇರಿದಂತೆ 52 ಕೋಟಿ ರೂ. ಗಳಷ್ಟು ಮೊತ್ತದ ಉಚಿತ ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಬಳಿಕ ಅತಿ ಕಡಿಮೆ ಮೊತ್ತದಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಫಾ.ರುಡೋಲ್ಫ್ ರವಿ ಡೇಸಾ, ಫಾ.ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ಉಪ ಆಡಳಿತಾಧಿಕಾರಿ ಫಾ.ನೆಲ್ಸನ್ ಧೀರಜ್ ಪಾಯಸ್, ಡೀನ್‌ಗಳಾದ ಡಾ.ಅಂತೋನಿ ಸಿಲ್ವನ್ ಡಿಸೋಜ, ಡಾ.ಅರ್ಬನ್ ಜೆ.ಎ. ಡಿಸೋಜ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹೊಸ ಪದವೀದರರ ಹೆತ್ತವರೂ ಸೇರಿ 3,500 ಜನರು ಈ ಪದವಿ ಪ್ರದಾನಕ್ಕೆ ಸಾಕ್ಷಿಯಾಗುವರು. ಅಗಸ್ಟಸ್ ಮುಲ್ಲರ್ ರಿಂದ ಸೇವಾ ಗುರಿಯೊಂದಿಗೆ 1880ರಲ್ಲಿ ಒಂದು ಆಲದ ಮರದಡಿ ಹುಟ್ಟಿದ ಫಾದರ್ ಮುಲ್ಲರ್ ಸಂಸ್ಥೆಯು ಈಗ ತಾನೇ ದೊಡ್ಡ ಆಲದ ಮರವಾಗಿ ಬೆಳೆದಿರುವುದು ಗಮನಾರ್ಹ.