Home ಟಾಪ್ ಸುದ್ದಿಗಳು ಪಾದಯಾತ್ರೆ ಮುಗಿಯುವಷ್ಟರಲ್ಲಿ ಸರ್ಕಾರ ಪತನ: ಕುಮಾರಸ್ವಾಮಿ

ಪಾದಯಾತ್ರೆ ಮುಗಿಯುವಷ್ಟರಲ್ಲಿ ಸರ್ಕಾರ ಪತನ: ಕುಮಾರಸ್ವಾಮಿ

ಬೆಂಗಳೂರು: 10 ವರ್ಷ ನಾವೇ ಸರ್ಕಾರದಲ್ಲಿ ಇರುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಆದರೆ ಈ ಸರ್ಕಾರ 10 ತಿಂಗಳು ಮುಂದುವರೆಯಲಿ ನೋಡೋಣ. ನಿಮ್ಮ ಪಾಪದ ಕೊಡ ತುಂಬಿದೆ. ನಮ್ಮ ಪಾದಯಾತ್ರೆ ಮೈಸೂರು ತಲಪುವವರೆಗೆ ಈ ಸರ್ಕಾರದ ವಿಕೆಟ್ ಗಳು ಬೀಳಬೇಕು. ಅದು ನಾಯಕನಿಂದಲೇ ಶುರುವಾಗಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಬಿಜೆಪಿ- ಜೆಡಿಎಸ್ ಪಾದಯಾತ್ರೆಗೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು ಮುಡಾದ ಬಗ್ಗೆ ಮಾತನಾಡುತ್ತೀರಾ? ಅದರ ಬಗ್ಗೆ ಮಾತಾಡುವುದಕ್ಕೆ ನಿಮಗೆ ಯಾವ ನೈತಿಕತೆ ಇದೆ. 14 ಸೈಟ್ ಯಾಕೆ? ಎಷ್ಟು ಬೇಕಾದರೂ ಕಾನೂನು ಪ್ರಕಾರ ಪಡೆದುಕೊಳ್ಳಲಿ. ಇವರು ಕಾನೂನು ಮೀರಿ ಸೈಟ್ ಪಡೆದಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯನವರೇ ಅದು ಯಾರ ಆಸ್ತಿ. ಮುಡಾ ಸರ್ಕಾರದ ಆಸ್ತಿ. ಬಡಾವಣೆ ಆಗಿರುವ ಆಸ್ತಿಯನ್ನು ನಿಮ್ಮ ಬಾಮೈದನ ಹೆಸರಿಗೆ ಮಾಡಲು ಅವಕಾಶ ಇದೆಯಾ? ಇದನ್ನ ಅಂಬೇಡ್ಕರ್ ಸಂವಿಧಾನದಲ್ಲಿ ಬರೆಯಲಾಗಿದ್ಯಾ? ಸರ್ಕಾರದ ಜಮೀನನ್ನ ನಿಮ್ಮ ಬಾಮೈದನ ಹೆಸರಿಗೆ ಹೇಗೆ ದಾಖಲಾತಿ ಮಾಡಿಕೊಟ್ಟರು. ಸಿದ್ದರಾಮಯ್ಯ ನನಗೆ ಇದ್ಯಾವುದು ಗೊತ್ತಿಲ್ಲ ಎನ್ನುತ್ತಾರೆ. 64 ಕೋಟಿ ಕೊಡಿ ಎನ್ನುತ್ತಿರಾ. ಅಲ್ಲಿ ನಡೆದ ಘಟನೆ ನಿಮ್ಮ ಗಮನಕ್ಕೆ ಬಾರದೇ ಆಗಿದೆಯಾ? ನಿಮ್ಮ ಪ್ರಭಾವ ಬೀರದೇ ಇಲ್ಲ ಎನ್ನುವುದಕ್ಕೆ ಸಾಧ್ಯವಿದೆಯಾ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿ ಹರಿಹಾಯ್ದರು.

Join Whatsapp
Exit mobile version