Home ಟಾಪ್ ಸುದ್ದಿಗಳು ಅಕ್ರಮ ಮದ್ಯ ಮಾರಾಟ ಜಾಲದ ತಡೆಗೆ ಬ್ರಹ್ಮಾಸ್ತ್ರ ಬಳಸಲು ಸರ್ಕಾರ ನಿರ್ಧಾರ

ಅಕ್ರಮ ಮದ್ಯ ಮಾರಾಟ ಜಾಲದ ತಡೆಗೆ ಬ್ರಹ್ಮಾಸ್ತ್ರ ಬಳಸಲು ಸರ್ಕಾರ ನಿರ್ಧಾರ

ಬೆಂಗಳೂರು: ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟ ಜಾಲದ ತಡೆಗೆ ಬ್ರಹ್ಮಾಸ್ತ್ರ ಬಳಸಲು ಸರ್ಕಾರ ನಿರ್ಧರಿಸಿದೆ.


ಈ ಹಿನ್ನೆಲೆಯಲ್ಲಿ ಡಿಸೆಂಬರ್ ಏಳರ ಗುರುವಾರ ನಡೆಯಲಿರುವ ಅಬಕಾರಿ ಡಿಸಿಗಳ ಸಭೆಗೆ ಕಟ್ಟು ನಿಟ್ಟಿನ ನಿರ್ದೇಶನ ರವಾನೆಯಾಗಲಿದ್ದು, ಹಳ್ಳಿಗಳಲ್ಲಿ ಆಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟ ಜಾಲದ ವಿರುದ್ಧ ವ್ಯಾಪಕ ದಾಳಿಗಳನ್ನು ಸಂಘಟಿಸುವಂತೆ ಸೂಚನೆ ನೀಡಲು ತೀರ್ಮಾನಿಸಲಾಗಿದೆ.


ವಿಧಾನಸೌಧದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಈ ಕುರಿತು ವಿವರ ನೀಡಿದರಲ್ಲದೆ, ಆಕ್ರಮ ಮಾರಾಟ ಜಾಲವನ್ನು ತಡೆಗಟ್ಟುವುದು ಸರ್ಕಾರದ ಮೊದಲ ಆದ್ಯತೆ ಎಂದು ನುಡಿದರು.


ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಿಂದಲೂ ರಾಜ್ಯಕ್ಕೆ ಮದ್ಯ ಬರುತ್ತಿದ್ದು ಇದನ್ನು ಕಟ್ಟು ನಿಟ್ಟಾಗಿ ತಡೆಯಲು ಗಡಿ ಬಾಗಗಳಲ್ಲಿ ಹೊಸತಾಗಿ 25 ಚೆಕ್ ಪೋಸ್ಟ್ ಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದರು.
ನೆರೆ ರಾಜ್ಯಗಳಿಂದ ಅಕ್ರಮವಾಗಿ ರಾಜ್ಯಕ್ಕೆ ಬರುತ್ತಿರುವ ಮದ್ಯವನ್ನು ತಡೆಗಟ್ಟದೇ ಹೋದರೆ ರಾಜ್ಯ ಸರ್ಕಾರದ ಆದಾಯಕ್ಕೆ ಹೊಡೆತ ಬೀಳಲಿದೆ ಎಂದ ಅವರು, ಹೀಗೆ ಹೊರರಾಜ್ಯಗಳಿಂದ ಎಲ್ಲೆಲ್ಲಿಗೆ ಮದ್ಯ ಬರುತ್ತಿದೆ ಎಂಬ ವಿವರವನ್ನು ಪತ್ತೆ ಹಚ್ಚಲಾಗಿದೆ ಎಂದರು.


ಯಶವಂತಪುರ ರೈಲ್ವೇ ನಿಲ್ದಾಣವೊಂದರಲ್ಲಿಯೇ ಐನೂರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದ ಅವರು, ಇದೇ ರೀತಿ ಎಲ್ಲೆಲ್ಲಿಂದ ಅಕ್ರಮವಾಗಿ ಮದ್ಯ ಒಳಗೆ ಬರುತ್ತಿದೆ ಎಂಬ ವಿವರ ಪಡೆಯಲಾಗಿದೆ ಎಂದು ನುಡಿದರು.
ರಾಜ್ಯದಲ್ಲಿ ಸಧ್ಯಕ್ಕೆ ಹದಿನಾಲ್ಕು ಅಬಕಾರಿ ಚೆಕ್ ಪೋಸ್ಟ್ ಗಳಿದ್ದು ಈಗಿನ ನಿರ್ಧಾರದಿಂದ ಅವುಗಳ ಸಂಖ್ಯೆ ಮೂವತ್ತೊಂಭತ್ತಕ್ಕೇರಲಿದೆ ಎಂದರು.


ಇವತ್ತು ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದರೆ ಕರ್ನಾಟಕದಲ್ಲಿ ಹೊಸ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡುವುದು ಅನಿವಾರ್ಯ ಎಂದವರು ಅಭಿಪ್ರಾಯಿಸಿದರು.
1997ರ ನಂತರ ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಿಲ್ಲ. ಹೀಗಾಗಿ ಬೇಡಿಕೆ ಹೆಚ್ಚಿದಂತೆ ಹೊಸ ಮದ್ಯದಂಗಡಿಗಳು ಲಭ್ಯವಾಗದೆ ಇರುವುದರಿಂದ ಆಕ್ರಮ ಮದ್ಯ ಮಾರಾಟ ಜಾಲ ಬೆಳೆದಿದೆ ಎಂದು ಅವರು ನುಡಿದರು.

ಹೀಗೆ ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳಿಗೆ ಬೇಡಿಕೆ ಇದೆ ಎಂಬ ಕಾರಣಕ್ಕಾಗಿ ತಕ್ಷಣ ಹೊಸ ಲೈಸೆನ್ಸ್ ನೀಡಲು ಸಾಧ್ಯವಿಲ್ಲ. ಯಾಕೆಂದರೆ ವಿಧಾನಸಭೆಗೆ ಚುನಾವಣೆಗಳು ಹತ್ತಿರ ಬರುತ್ತಿರುವ ಕಾಲದಲ್ಲಿ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಿದರೆ ಅನಗತ್ಯವಾಗಿ ಹುಯಿಲೆಬ್ಬಿಸಲಾಗುತ್ತದೆ ಎಂದು ಸಚಿವ ಗೋಪಾಲಯ್ಯ ಅಸಹಾಯಕತೆ ವ್ಯಕ್ತಪಡಿಸಿದರು.
ಆದರೆ ಮುಂದಿನ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಈಗಾಗಲೇ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ನಡೆದಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತವಾಗಿದೆ. ಇದೇ ರೀತಿ ಬಿಜೆಪಿ ಕರ್ನಾಟಕದಲ್ಲೂ ಮರಳಿ ಅಧಿಕಾರ ಹಿಡಿಯಲಿದೆ ಎಂದರು.
ಮರಳಿ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕದಲ್ಲಿ ಹೊಸ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಬೇಕು ಎಂಬ ಪ್ರಸ್ತಾವವನ್ನು ಖಂಡಿತ ಪರಿಶೀಲಿಸಲಾಗುವುದು ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.


ಹೊಸ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡುವ ಕೆಲಸವಾಗದಿದ್ದರೆ ಹಳ್ಳಿ-ಹಳ್ಳಿಗಳಲ್ಲಿ ನಡೆಯುತ್ತಿರುವ ಆಕ್ರಮ ಮದ್ಯ ಮಾರಾಟ ಜಾಲ ಬೆಳೆಯುತ್ತದೆ.ಇದನ್ನು ತಡೆಗಟ್ಟಬೇಕು ಎಂದರೆ ಹೊಸ ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ಕೊಡಬೇಕು ಎಂದು ಸ್ಪಷ್ಟ ಪಡಿಸಿದರು.
ಈ ವರ್ಷ ಅಬಕಾರಿ ಇಲಾಖೆಗೆ 29 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ ಎಂದ ಅವರು, ಡಿಸೆಂಬರ್ ಐದರ ವೇಳೆಗೆ 19,897 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.


ಕಳೆದ ವರ್ಷ ಇದೇ ವೇಳೆಗೆ 17.225 ಕೋಟಿ ರೂಪಾಯಿ ಅಬಕಾರಿ ಆದಾಯ ಸಂಗ್ರಹವಾಗಿತ್ತು. ಆದರೆ ಈ ಬಾರಿ ಅದಕ್ಕಿಂತ ಎರಡೂವರೆ ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಿನ ಆದಾಯ ಬಂದಿದೆ ಎಂದು ವಿವರಿಸಿದರು.
ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದ್ದು ಹೊಸತಾಗಿ 1000 ಮಂದಿ ಕಾನ್ಸ್ ಟೇಬಲ್ ಗಳು ಮತ್ತು 100 ಮಂದಿ ಇನ್ಸ್ ಪೆಕ್ಟರ್ ಗಳನ್ನು ನೇಮಕ ಮಾಡಿಕೊಳ್ಳುವ ಕುರಿತು ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ.ಅದರ ಒಪ್ಪಿಗೆ ದೊರೆತ ನಂತರ ಈ ಕುರಿತ ಪ್ರಕ್ರಿಯೆಗೆ ಚಾಲನೆ ನೀಡವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯಲಾಗುತ್ತದೆ ಎಂದು ತಿಳಿಸಿದರು.

Join Whatsapp
Exit mobile version