ನವದೆಹಲಿ: ಅಫ್ಘಾನ್ ನಲ್ಲಿ ಸಿಲುಕಿಹಾಕಿಕೊಂಡಿರುವ ಭಾರತೀಯ ಕಾರ್ಮಿಕರನ್ನು ರಕ್ಷಿಸಲು ಸರ್ಕಾರ ಆದ್ಯತೆ ನೀಡಲಿದೆಯೆಂದು ಒಕ್ಕೂಟ ಸರ್ಕಾರ ಘೋಷಿಸಿದೆ. ಈ ಸಂಬಂಧ ಅವರನ್ನು ಶೀಘ್ರವೇ ಸಂಪರ್ಕಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಗುರುವಾರ ಸರ್ಕಾರದ ಮೂಲಗಳು ತಿಳಿಸಿವೆ.
ಭಾರತೀಯ ಮೂಲದ ಕಾರ್ಮಿಕರು ಅಫ್ಘಾನ್ ನ ವಿವಿಧ ಯೋಜನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಾತ್ರವಲ್ಲದೆ ಆಗಸ್ಟ್ 15, 2021 ರಂದು ತಾಲಿಬಾನ್ ಬಂಡುಕೋರರು ಅಫ್ಘಾನ್ ಅನ್ನು ಸಂಪೂರ್ಣವಾಗಿ ವಶಪಡಿಸಿದ ನಂತರ ಅಲ್ಲಿನ ಭಾರತೀಯ ಕಾರ್ಮಿಕರು ತಾಯ್ನಾಡಿಗೆ ಮರಳಲು ಕಾತುರದಿಂದ ಕಾಯುತ್ತಿದ್ದಾರೆ.
ಈ ನಡುವೆ ಜಲಾಲಬಾದ್ ಮತ್ತು ಖೋಸ್ಟ್ ನಂತಹ ಸ್ಥಳಗಳಲ್ಲಿ ತಾಲಿಬಾನ್ ಮತ್ತು ಅಫ್ಘಾನ್ ಸೇನೆಯ ನಡುವಿನ ಘರ್ಷಣೆಯ ವರದಿ ಹಿನ್ನೆಲೆಯಲ್ಲಿ ಭಾರತೀಯ ಅಧಿಕಾರಿಗಳು ಭಾರತೀಯ ಕಾರ್ಮಿಕರನ್ನು ಸಂಪರ್ಕಿಸಿ ಅವರನ್ನು ಸುರಕ್ಷಿತವಾಗಿ ಕಾಬೂಲ್ ಗೆ ಕರೆತರುವುದು ಸವಾಲಾಗಿದೆಯೆಂದು ಮೂಲಗಳು ತಿಳಿಸಿವೆ.
ಅನೇಕ ಭಾರತೀಯ ಕಾರ್ಮಿಕರು ತಮ್ಮ ಪಾಸ್ ಪೋರ್ಟ್ ಗಳನ್ನು ಕಂಪೆನಿಯಲ್ಲಿ ಠೇವಣಿ ಮಾಡಿರುವುದರಿಂದ ಭಾರತಕ್ಕೆ ಮರಳಲು ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಭಾರತೀಯ ಕಾರ್ಮಿಕರಿಗೆ ಪಾಸ್ ಪೋರ್ಟ್, ಆಧಾರ್ ಸಹಿತ ಹಲವು ದಾಖಲೆಗಳನ್ನು ವ್ಯವಸ್ಥೆಗೊಳಿಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅಫ್ಘಾನ್ ನಿಂದ ಭಾರತೀಯರನ್ನು ಮರಳಿ ಕರೆತರುವುದು ಸರ್ಕಾರದ ಮೊದಲ ಆದ್ಯತೆಯಾಗಿದೆಯೆಂದು ಪುನರುಚ್ಚಿಸಿದ್ದಾರೆ.
ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಮುಚ್ಚಿರುವುದರಿಂದ ಭಾರತೀಯ ಕಾರ್ಮಿಕರು ಅಧಿಕಾರಿಗಳನ್ನು ಸಂಪರ್ಕಿಸುವಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅದಾಗ್ಯೂ ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲಾಗುವುದೆಂದು ಭಾರತೀಯ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಒಕ್ಕೂಟ ಸರ್ಕಾರ ತಿಳಿಸಿದೆ .