Home ಟಾಪ್ ಸುದ್ದಿಗಳು ಮೀನು-ತರಕಾರಿ ಮಾರುವಂತೆ ರಾಷ್ಟ್ರಧ್ವಜವನ್ನು ಮಾರಾಟ ಮಾಡುತ್ತಿರುವ ಸರ್ಕಾರ: ದಿನೇಶ್ ಗುಂಡೂರಾವ್

ಮೀನು-ತರಕಾರಿ ಮಾರುವಂತೆ ರಾಷ್ಟ್ರಧ್ವಜವನ್ನು ಮಾರಾಟ ಮಾಡುತ್ತಿರುವ ಸರ್ಕಾರ: ದಿನೇಶ್ ಗುಂಡೂರಾವ್

ಬೆಂಗಳೂರು: ‘ಹರ್ ಘರ್ ತಿರಂಗ’ ಅಭಿಯಾನದ ಅಂಗವಾಗಿ ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ ಕಳಪೆ ರಾಷ್ಟ್ರಧ್ವಜವನ್ನು ವಿತರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ  ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಷ್ಟ್ರಧ್ವಜಕ್ಕೆ ತನ್ನದೇ ಆದ ಗೌರವವಿದೆ. ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗ’ ಹೆಸರಿನಲ್ಲಿ ರಾಷ್ಟ್ರಧ್ವಜಕ್ಕಿದ್ದ ಗೌರವವನ್ನು ಅದ್ವಾನ ಮಾಡಿದೆ. ಪಾಲಿಸ್ಟರ್ ಬಟ್ಟೆಯ ರಾಷ್ಟ್ರಧ್ವಜಗಳನ್ನು ಮೀನು-ತರಕಾರಿ ಮಾರುವಂತೆ ಕಾಲಬುಡದಲ್ಲಿ ಇಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ. ಈ ರೀತಿ ರಾಷ್ಟ್ರಧ್ವಜವನ್ನು ಅಪಮಾನಿಸುವುದು ಯಾವ ಸೀಮೆಯ ದೇಶಭಕ್ತಿ ಎಂದು ಪ್ರಶ್ನಿಸಿದರು.

ಧ್ವಜ ಸಂಹಿತೆಯ ಪ್ರಕಾರ ರಾಷ್ಟ್ರಧ್ವಜದ ಮೂರು ಬಣ್ಣಗಳು ಸಮಾನವಾಗಿರಬೇಕು. 24 ಕಡ್ಡಿಗಳ ನೀಲಿ ಚಕ್ರ ಬಾವುಟದ ಮಧ್ಯದಲ್ಲಿರಬೇಕು. ಆದರೆ ಸರ್ಕಾರ ವಿತರಿಸಿರುವ ಬಾವುಟಗಳು ಮೂಲ ಸ್ವರೂಪ ಕಳೆದುಕೊಂಡು ಕುಲಗೆಟ್ಟು ಹೋಗಿವೆ. ಈ ಬಗ್ಗೆ ಸ್ವತಃ ಬಿಜೆಪಿಯವರೇ ಅಸಮಾಧಾನ ಹೊರಹಾಕಿದ್ದಾರೆ. ‘ಹರ್ ಘರ್ ತಿರಂಗ’ ಕೇಂದ್ರದ ನಕಲಿ ದೇಶಪ್ರೇಮದ ಅಸಹ್ಯ ಪ್ರದರ್ಶನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಾರಿ ಖಾದಿಯಿಂದ ತಯಾರಿಸುತ್ತಿದ್ದ ರಾಷ್ಟ್ರಧ್ವಜದ ಬದಲು ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ ಕಳಪೆ ರಾಷ್ಟ್ರಧ್ವಜಕ್ಕೆ ಅವಕಾಶ ನೀಡಲಾಗಿದೆ. ಬ್ರಿಟಿಷರ ವಿರುದ್ಧ ನಡೆದ ‘ಅಸಹಕಾರ ಚಳವಳಿ’ಯಲ್ಲಿ ಖಾದಿಯ ಪಾತ್ರ ಅತ್ಯಂತ ದೊಡ್ಡದು. ಆದರೆ ಕೇಂದ್ರ ಖಾದಿಯ ಬದಲು ಪಾಲಿಸ್ಟರ್ ಬಟ್ಟೆಯ ರಾಷ್ಟ್ರಧ್ವಜಕ್ಕೆ ಅವಕಾಶ ಕೊಟ್ಟಿರುವ ಹಿಂದಿನ ಹುನ್ನಾರವೇನು  ಎಂದು ಕೇಳಿದರು.

‘ಮೇಕ್ ಇನ್ ಇಂಡಿಯಾ’ ಎಂದು ಕಂತೆ ಪುರಾಣ ಹೊಡೆಯುವ ಮೋದಿಯವರು ಚೀನಾದಿಂದ ಪಾಲಿಸ್ಟರ್ ಬಟ್ಟೆ ತರಿಸಿ ರಾಷ್ಟ್ರಧ್ವಜ ತಯಾರಿಸಲು ಅವಕಾಶ ನೀಡಿದ್ದಾರೆ. ಇದು ಯಾರಿಗೆ ಅನುಕೂಲ ಮಾಡಿಕೊಡಲು? ಖಾದಿ ಉದ್ಯಮ ಸೊರಗುತ್ತಿರುವ ಈ ಸಂದರ್ಭದಲ್ಲಿ, ಖಾದಿ ಉದ್ಯಮವನ್ನು ಮೇಲೆತ್ತಲು ಸುವರ್ಣ ಅವಕಾಶವಿತ್ತು.ಆದರೆ ಸರ್ಕಾರವೇ ಖಾದಿ ಉದ್ಯಮದ ಕತ್ತು ಹಿಸುಕಿದೆ ಎಂದು ಹೇಳಿದರು.

ಮೋದಿಯವರ ಆಡಳಿತ ವೈಫಲ್ಯದಿಂದ ದೇಶ ಇಂದು ಅನೇಕ ಸಮಸ್ಯೆಯಲ್ಲಿದೆ. ಹರ್ ಘರ್ ತಿರಂಗ ಅಭಿಯಾನವು  ಈ ವೈಫಲ್ಯವನ್ನು ಮರೆಮಾಚುವ ಯತ್ನವೇ ಹೊರತು, ಇದರಲ್ಲಿ ಅಲ್ಪ ಪ್ರಮಾಣದ ದೇಶಪ್ರೇಮವಿಲ್ಲ. ತ್ರಿವರ್ಣ ಧ್ವಜವನ್ನು RSS ಯಾವತ್ತೂ ಒಪ್ಪಿರಲಿಲ್ಲ. ಆದರೆ RSSನ ರಾಜಕೀಯ ಮುಖವಾಣಿ BJPಯವರಿಗೆ ಇದ್ದಕಿದ್ದಂತೆ ತ್ರಿವರ್ಣ ಧ್ವಜದ ಮೇಲೆ ಪ್ರೇಮ ಹುಟ್ಟಲು ಕಾರಣವೇನು? ಎಂದು ಗುಡುಗಿದರು.

Join Whatsapp
Exit mobile version