Home ಕರಾವಳಿ ಮನೆ ನಿರ್ಮಾಣಕ್ಕೆ ಅಲ್ಪಸಂಖ್ಯಾತರಿಗೆ 5 ಲಕ್ಷ ರೂ.ಗಳ ನೂತನ ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಮುಕ್ತಾರ್ ಹುಸೇನ್...

ಮನೆ ನಿರ್ಮಾಣಕ್ಕೆ ಅಲ್ಪಸಂಖ್ಯಾತರಿಗೆ 5 ಲಕ್ಷ ರೂ.ಗಳ ನೂತನ ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಮುಕ್ತಾರ್ ಹುಸೇನ್ ಪಠಾಣ್

ಮಂಗಳೂರು: ಅಲ್ಪಸಂಖ್ಯಾತರು ಮನೆ ನಿರ್ಮಿಸಿಕೊಳ್ಳಲು ಅನುಕೂಲವಾಗುವಂತೆ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ 5 ಲಕ್ಷ ರೂಪಾಯಿಗಳ ಸಾಲ ನೀಡುವ ನೂತನ ಯೋಜನೆಯ ಅನುಮೋದನೆಗಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್ ಹುಸೇನ್ ಪಠಾಣ್ ತಿಳಿಸಿದರು.
ಅವರು ಸೋಮವಾರ ನಗರದ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಮುಂದಿನ ಆಯವ್ಯಯದಲ್ಲಿ ಈ ನೂತನ ಯೋಜನೆಗೆ ಅನುಮೋದನೆ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಪಿಎಲ್ ಕುಟುಂಬದ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ನೀಡಲು ಉದ್ದೇಶಿಸಿರುವ 5 ಲಕ್ಷ ರೂ.ಗಳ ಸಾಲ ಯೋಜನೆಯಲ್ಲಿ ಒಂದೂವರೆ ಲಕ್ಷ ರೂಪಾಯಿ ಸಬ್ಸಿಡಿ ನೀಡುವ ಉದ್ದೇಶವಿದೆ ಎಂದರು.


ಅರಿವು ಶೈಕ್ಷಣಿಕ ಸಾಲ ಸೌಲಭ್ಯ ಯೋಜನೆಯಡಿ ಕಳೆದ ವರ್ಷ 77 ಕೋಟಿ ಹಾಗೂ ಪ್ರಸಕ್ತ ಸಾಲಿನಲ್ಲಿ 57 ಕೋಟಿ ರೂಪಾಯಿಗಳ ಸಾಲ ಸೌಲಭ್ಯ ನೀಡಲಾಗಿದೆ. ಮುಂದಿನ ವರ್ಷ 200 ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡುವ ಕುರಿತು ಚಿಂತಿಸಲಾಗಿದ್ದು, ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ, ಪ್ರಸಕ್ತ ಸಾಲಿನಲ್ಲಿ ಅರಿವು ಸಾಲಕ್ಕಾಗಿ ಡಿ.15 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೊರೋನಾ ಸಂದರ್ಭದಲ್ಲಿ 24 ಸಾವಿರ ಜನರಿಗೆ ತಲಾ 10 ಸಾವಿರ ರೂಪಾಯಿಗಳಂತೆ ಸಾಲ ಸೌಲಭ್ಯ ನೀಡಲಾಗಿದೆ. ಈ ಬಾರಿಯೂ ಸುಮಾರು 12 ಸಾವಿರ ಜನರಿಗೆ ಕೋವಿಡ್ ಹಿನ್ನೆಲೆಯಲ್ಲಿ ಸಾಲ ನೀಡುವ ಗುರಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಸಾವಿರ ಜನರಿಗೆ ಸಾಲ ಸೌಲಭ್ಯ ನೀಡಲು ಗುರಿ ನೀಡಲಾಗಿದೆ, ಆಟೋ ರಿಕ್ಷಾ ಖರೀದಿಗೆ 75 ಸಾವಿರ ರೂಪಾಯಿ ಸಬ್ಸಿಡಿಯೊಂದಿಗೆ 2.5 ಲಕ್ಷ ರೂಪಾಯಿ ಸಾಲ ನೀಡಲಾಗಿದೆ. ನಿಗಮ ಮತ್ತು ವಕ್ಫ್ ಬೋರ್ಡ್ಗೆ ಸಂಬಂಧಿಸಿದಂತೆ ಯಾವುದೇ ಸಹಾಯ ಪಡೆದುಕೊಳ್ಳಲು 8277799990 ಸಹಾಯ ವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು, ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಬಹುದು. ಕಳೆದ ಬಾರಿ ಕೊರೋನಾ, ನೆರೆ ಕಾರಣ ದಿಂದ ಸುಮಾರು 36 ಕೋಟಿ ರೂಪಾಯಿ ಅನುದಾನದ ಕೊರತೆಯಾಗಿದೆ ಎಂದು ಮುಕ್ತಾರ್ ಹುಸೇನ್ ಪಠಾಣ್ ತಿಳಿಸಿದರು.


ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ನಿರ್ದೇಶಕ ಸಿರಾಜುದ್ದೀನ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್. ಅಂಜನಪ್ಪ ಸೇರಿದಂತೆ ಇತರೆ ಮುಖಂಡರು ಗೋಷ್ಠಿಯಲ್ಲಿದ್ದರು.

Join Whatsapp
Exit mobile version