Home ಟಾಪ್ ಸುದ್ದಿಗಳು ಬಟ್ಟೆ ಬ್ಯಾಗ್ ಖರೀದಿ ಹಗರಣ: ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಸರ್ಕಾರ ಆದೇಶ

ಬಟ್ಟೆ ಬ್ಯಾಗ್ ಖರೀದಿ ಹಗರಣ: ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಸರ್ಕಾರ ಆದೇಶ

ಮೈಸೂರು: ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಬಟ್ಟೆ ಬ್ಯಾಗ್ ಖರೀದಿ ಹಗರಣದ ತನಿಖೆಗೆ ಕರ್ನಾಟಕ ಸರ್ಕಾರ ಆದೇಶಿಸಿದೆ. ಶಾಸಕ ಸಾ.ರಾ.ಮಹೇಶ್ ಈ ಹಗರಣವನ್ನು ಬಯಲಿಗೆ ಎಳೆದಿದ್ದರು. ನಗರಸಭೆ, ಪುರಸಭೆ ಮತ್ತು ಮಹಾನಗರಪಾಲಿಕೆಗಳ ಪೂರ್ವಾನುಮತಿಯಿಲ್ಲದೆ ದುಬಾರಿ ಬೆಲೆಗೆ ಬ್ಯಾಗ್ ಗಳನ್ನು ಖರೀದಿಸಲಾಗಿತ್ತು ಎಂದು ಮಹೇಶ್ ಆರೋಪ ಮಾಡಿದ್ದರು.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಅವರು 14.71 ಲಕ್ಷ ಬಟ್ಟೆ ಬ್ಯಾಗ್ ಗಳನ್ನು 14 ಕೋಟಿ ರೂ.ಮೊತ್ತಕ್ಕೆ ಖರೀದಿಸಿದ್ದರು. ಕೈಮಗ್ಗ ನಿಗಮದ ಬದಲು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡುವ ಮೂಲಕ ರೋಹಿಣಿ ಕಿಕ್ ಬ್ಯಾಕ್ ಪಡೆದಿದ್ದಾರೆ. ಈ ಹಗರಣದಲ್ಲಿ 6.18 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು.

ಈ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ರೋಹಿಣಿ ಸಿಂಧೂರಿ, ‘ಶಾಸಕರ ಆರೋಪಗಳು ಆಧಾರರಹಿತ. ಬ್ಯಾಗ್‌ ಪೂರೈಕೆಯ ಗುತ್ತಿಗೆಯನ್ನು ನಿಯಮಾನುಸಾರ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು. ನಿಗಮವೇ ದರ ನಿಗದಿ ಮಾಡಿದ್ದು, ನನ್ನ ಪಾತ್ರ ಇಲ್ಲ. ಪ್ರಾದೇಶಿಕ ಜವಳಿ ಪ್ರಯೋಗಾಲಯ ಸಮಿತಿಯು ಬ್ಯಾಗ್‌ ಗಳ ಗುಣಮಟ್ಟ ದೃಢೀಕರಿಸಿತ್ತು. ನಾನು ಜಿಲ್ಲಾಧಿಕಾರಿಯಾಗಿದ್ದಾಗ ಒಂದು ಪೈಸೆಯನ್ನೂ ನಿಗಮಕ್ಕೆ ನೀಡಿಲ್ಲ. ಈಗ 9.59 ಲಕ್ಷ ರೂ.ಮಾತ್ರ ನಿಗಮಕ್ಕೆ ಪಾವತಿಯಾಗಿದೆ’ ಎಂದು ಹೇಳಿದ್ದರು.

Join Whatsapp
Exit mobile version