ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಭಯದ ವಾತಾವರಣ ಸೃಷ್ಟಿಸುತ್ತಿರುವ ಸರ್ಕಾರ: ಎಂ.ಕೆ.ಫೈಝಿ ಕಿಡಿ

Prasthutha|

ನವದೆಹಲಿ: ನಸುಕಿನ ಜಾವದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ಕಚೇರಿಗಳು, ನಾಯಕರ ಮನೆಗಳ ಮೇಲೆ ದಾಳಿ ಮಾಡಿ ನಾಯಕರನ್ನು ಬಂಧಿಸಿರುವುದನ್ನು ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಇಲ್ಲದ ಶತ್ರುವನ್ನು ಊಹಾತ್ಮಕವಾಗಿ “ಶಾಡೋ ಎನಿಮಿ” ರೀತಿಯಲ್ಲಿ ಈ ಸರ್ಕಾರ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿದೆ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಎಲ್ಲ ರಂಗದಲ್ಲೂ ವಿಫಲವಾಗಿರುವ ಈ ಫಾಸಿಸ್ಟ್ ಸರ್ಕಾರ, ಇಂತಹ ದಾಳಿಗಳ ಮೂಲಕ ತನ್ನ ವೈಫಲ್ಯಗಳನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.

ನೂರಕ್ಕೂ ಹೆಚ್ಚು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಒಂದಷ್ಟು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕರನ್ನು ದೇಶಾದ್ಯಂತ ನಿನ್ನೆ ಮಧ್ಯರಾತ್ರಿ ನಂತರ ಬಂಧಿಸಲಾಗಿದೆ. ಬಂಧನವಾಗಿರುವವರಲ್ಲಿ ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ನಾಯಕರು ಇದ್ದಾರೆ. ಈ ಮನುವಾದಿ ಫ್ಯಾಶಿಸ್ಟ್ ಸರ್ಕಾರ, ತನ್ನ ವಿರೋಧಿಗಳನ್ನು ಹೆದರಿಸುವ ಪ್ರಯತ್ನದ ಭಾಗವಾಗಿ ತನ್ನ ಕೈಗೊಂಬೆಗಳಾಗಿರುವ ಎನ್.ಐ.ಎ ಮತ್ತು ಇ.ಡಿ ಯನ್ನು ಬಳಸಿಕೊಂಡು ಈ ನಾಯಕರ ಮನೆಗಳ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಿದೆ ಎಂದು ಅವರು ಆರೋಪಿಸಿದ್ದಾರೆ.

- Advertisement -

ರಾಷ್ಟ್ರಮಟ್ಟದಲ್ಲಿ ಈ ನಾಯಕರ ಮನೆಗಳ ಮೇಲೆ ಆಗಿರುವಂತಹ ದಾಳಿ ಪ್ರತಿರೋಧದ ಧ್ವನಿಯನ್ನು ಅಡಗಿಸುವ ಪ್ರಯತ್ನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮುಖ್ಯ ವಿರೋಧ ಪಕ್ಷಗಳು ಈ ಫಾಶಿಸ್ಟ್ ಸರ್ಕಾರದ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತದೆ ಶರಣಾಗಿರುವಂತೆ ವರ್ತಿಸುತ್ತಿವೆ. ಈ ಸನ್ನಿವೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಿರೋಧ ಪಕ್ಷಗಳ ಜವಾಬ್ದಾರಿಯನ್ನು ಕೈಗೆತ್ತಿಕೊಂಡು ದೇಶಕ್ಕೆ ಗಂಡಾಂತರ ಒಡ್ಡುತ್ತಿರುವ ಈ ಮನುವಾದಿ ಫಾಶಿಸ್ಟ್ ಸರ್ಕಾರದ ವಿರುದ್ಧ ಹೋರಾಟವನ್ನು ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಆರ್.ಎಸ್.ಎಸ್ ನೇತೃತ್ವದ ಈ ಫಾಶಿಸ್ಟ್ ಸರ್ಕಾರ ಈ ರೀತಿಯ ದಾಳಿಗಳು ಮತ್ತು ಬಂಧನಗಳ ಮೂಲಕ ನಮ್ಮ ಧ್ವನಿಯನ್ನು ಅಡಗಿಸುವಂತಹ ಕನಸನ್ನು ಕಾಣುತ್ತಿದ್ದರೆ ಅದು ಕನಸಾಗಿಯೇ ಉಳಿಯಲಿದೆ ಎಂದು ಫೈಝಿ ಹೇಳಿದರು.

ಇಂತಹ ಅನ್ಯಾಯದ ದಾಳಿಗಳ ವಿರುದ್ಧ ನಾವು ಜನಶಕ್ತಿಯನ್ನು ಬಳಸಿಕೊಂಡು ಹೋರಾಟ ಮಾಡಲಿದ್ದೇವೆ. ಈ ದಾಳಿ ಮತ್ತು ಬಂಧನಗಳು ನಮ್ಮ ಸಂಘಟನೆಯ ನಾಯಕರನ್ನು ಭಯಭೀತರನ್ನಾಗಿಸುವ ಮತ್ತು ಅಮಾಯಕ ಜನರಲ್ಲಿ ನಮ್ಮ ವಿರುದ್ಧ ದ್ವೇಷವನ್ನು ಬಿತ್ತಿ ನಮ್ಮನ್ನು ದೇಶದ ಶತ್ರುಗಳು ಎಂದು ಬಿಂಬಿಸಲು ಹೂಡಿರುವ ತಂತ್ರದ ಭಾಗವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ದಾಳಿ ಮತ್ತು ಆರೋಪಗಳನ್ನು ಈ ಫಾಶಿಸ್ಟ್ ಸರ್ಕಾರ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಆದರೆ ಇಲ್ಲಿಯವರೆಗೆ ಈ ಸರ್ಕಾರಕ್ಕೆ ನಮ್ಮ ಸಂಘಟನೆಗಳ ವಿರುದ್ಧ ಯಾವುದೇ ರೀತಿಯ ದೇಶ ವಿರೋಧಿ ಚಟುವಟಿಕೆ ಅಥವಾ ಆರ್ಥಿಕ ಅಪರಾಧಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಈ ರೀತಿಯ ಅನ್ಯಾಯದ ಮತ್ತು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳನ್ನು ಈ ಫಾಶಿಸ್ಟ್ ಸರ್ಕಾರ ನಡೆಸುತ್ತಿದ್ದರು ಕೂಡ ಈ ಬಗ್ಗೆ ಜಾತ್ಯತೀತ ಎಂದು ಹೇಳಿಕೊಳ್ಳುವಂತಹ ರಾಜಕೀಯ ಪಕ್ಷಗಳು ಯಾವುದೇ ಧ್ವನಿಯನ್ನು ಎತ್ತದಿರುವುದು ವಿಷಾದದ ಸಂಗತಿ ಎಂದು ವಿರೋಧ ಪಕ್ಷಗಳ ವಿರುದ್ಧ ಫೈಝಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಮನುವಾದಿ ಫಾಸಿಸ್ಟ್ ಸರ್ಕಾರವನ್ನು ಪರಾಜಯಗೊಳಿಸಲು ಎಲ್ಲ ಜಾತ್ಯತೀತ ಪಕ್ಷಗಳು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಅವರು ಕರೆಕೊಟ್ಟಿದ್ದಾರೆ. ಬಂಧಿತ ಎಲ್ಲಾ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ ಅವರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಈ ದೇಶದ ಜಾತ್ಯತೀತ ಜನರೊಂದಿಗೆ ಒಗ್ಗೂಡಿ ಈ ಸಂವಿಧಾನ ವಿರೋಧಿ ಫಾಶೀಸ್ಟ್ ಸರ್ಕಾರದ ನಡವಳಿಕೆಯ ವಿರುದ್ಧ ಹೋರಾಟ ಮುಂದುವರಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Join Whatsapp