ಬೆಳಗಾವಿ: ಆಲಮಟ್ಟಿ ಹಾಗೂ ಹಿಪ್ಪರಗಿ ಬ್ಯಾರೇಜ್ ಹಿನ್ನೀರಿನಿಂದ ಮುಳುಗಡೆಯಾಗುವ ಅಥಣಿ ತಾಲ್ಲೂಕಿನ ಜನವಾಡ, ಮಹಿಷವಾಡಗಿ, ನಂದೇಶ್ವರ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಮನೆಗಳ ಸಂಖ್ಯೆಯ ಆಧಾರದ ಮೇಲೆ ಪಂಚಾಯಿತಿ ಆಸ್ತಿ ರಿಜಿಸ್ಟರ್ ಮತ್ತು ಮುಳುಗಡೆ ಸಮೀಕ್ಷೆ ಆಧರಿಸಿ ಹದಿನೈದು ದಿನಗಳಲ್ಲಿ ಹಕ್ಕುಪತ್ರಗಳನ್ನು ವಿತರಿಸಬೇಕು ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಸೂಚನೆ ನೀಡಿದರು.
ಚಿಕ್ಕೋಡಿ ಪ್ರವಾಸಿಮಂದಿರದಲ್ಲಿ ಶನಿವಾರ ನಡೆದ ಮುಂಗಾರು ಹಂಗಾಮಿನಲ್ಲಿ ಪ್ರವಾಹ/ಅತಿವೃಷ್ಟಿಯಿಂದ ಬಾಧಿತಗೊಂಡ ಪ್ರದೇಶಗಳಲ್ಲಿ ಕೈಗೊಂಡ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆ ಸಂತ್ರಸ್ತ ಕುಟುಂಬಗಳಿಗೆ ಈಗಾಗಲೇ ಪರಿಹಾರ ನೀಡಿರುವುದರಿಂದ ತಕ್ಷಣವೇ ಅವರಿಗೆ ನೀಡಲಾದ ಸ್ಥಳಗಳಿಗೆ ಸ್ಥಳಾಂತರಗೊಳಿಸಲು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಹಕ್ಕುಪತ್ರಗಳನ್ನು ನೀಡುವುದರ ಜತೆಗೆ ಪುನರ್ವಸತಿ ಕೇಂದ್ರಗಳಲ್ಲಿ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಪದೇ ಪದೆ ಪ್ರವಾಹ ಪರಿಸ್ಥಿತಿ ಎದುರಾಗುವುದರಿಂದ ಕೂಡಲೇ ಹಕ್ಕುಗಳನ್ನು ವಿತರಿಸಿ ಕುಟುಂಬಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಆಲಮಟ್ಟಿ ಜಲಾಶಯದ ಎತ್ತರ 524 ಮೀಟರ್ ಗಮನದಲ್ಲಿಟ್ಟುಕೊಂಡು ಪುನರ್ವಸತಿ ಕೇಂದ್ರಗಳನ್ನು ಗುರುತಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ತಿಳಿಸಿದರು.
ಬೆಳೆಹಾನಿ ಸಮೀಕ್ಷೆ ಲೋಪ; ಅಮಾನತಿಗೆ ಸೂಚನೆ:
ಪ್ರವಾಹ ಕಡಿಮೆಯಾದ ಬಳಿಕ ಜಮೀನುಗಳಿಗೆ ತೆರಳಿ ಬೆಳೆಹಾನಿಯನ್ನು ಸಮರ್ಪಕವಾಗಿ ಸಮೀಕ್ಷೆ ಕೈಗೊಳ್ಳಬೇಕು. ಬೆಳಹಾನಿಗೊಳಗಾದ ಯಾವುದೇ ಜಮೀನು ಸಮೀಕ್ಷೆಯಿಂದ ಹೊರಗುಳಿಯಬಾರದು. ಬೆಳೆ ಕಳೆದುಕೊಂಡ ಎಲ್ಲ ರೈತರಿಗೂ ಪರಿಹಾರ ದೊರಕುವಂತಾಗಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಮೀಕ್ಷೆಯಲ್ಲಿ ಲೋಪದೋಷ ಮಾಡಿದರೆ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಎಂದು ಉಪ ವಿಭಾಗಾಧಿಕಾರಿಗಳಿಗೆ ತಿಳಿಸಿದರು.
ಮನೆಹಾನಿ ಸಮೀಕ್ಷೆ ಮಾಡುವಾಗ ಎಚ್ಚರಿಕೆಯಿಂದ ಪರಿಶೀಲಿಸಬೇಕು. ಕಡ್ಡಾಯವಾಗಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಬೇಕು. ಅನರ್ಹರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತಹ ಅಧಿಕಾರಿ/ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸಚಿವ ಕಾರಜೋಳ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಮೀಕ್ಷೆ ಕೈಗೊಳ್ಳುವ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಿ ದೃಢೀಕರಿಸಬೇಕು ಎಂದು ತಿಳಿಸಿದರು