ಜಲಸಂಪನ್ಮೂಲ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಆದ್ಯತೆ ನೀಡಲು ಕಾರಜೋಳ ಸೂಚನೆ

Prasthutha|


ಬೆಂಗಳೂರು: ಜಲಸಂಪನ್ಮೂಲ ಇಲಾಖೆಯ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸಲು ಪ್ರಮುಖವಾಗಿ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಆದ್ಯತೆ ನೀಡಿ, ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ಅವರು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.


ಕರ್ನಾಟಕ ನೀರಾವರಿ ನಿಗಮದಲ್ಲಿಂದು ನಡೆದ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಯ ನಿಗಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೃಷ್ಣಾ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ರ್ಯನಯ ಜಲ ನಿಗಮ ಗಳಡಿ ಅನುಷ್ಠಾನಗೊಳಿಸುತ್ತಿರುವ ಪ್ರಮುಖ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ, ಮಹಾದಾಯಿ ಕಣಿವೆಯ ಕಳಸಾ ಮತ್ತು ಬಂಡೂರು ನಾಲಾ ತಿರುವು ಯೋಜನೆಗಳ, ನವಲಿ ಸಮತೋಲನಾ ಜಲಾಶಯ ನಿರ್ಮಾಣ ಯೋಜನಾ ಕಾಮಗಾರಿಗಳ ಪ್ರಸ್ತುತ ಹಂತದ ಭೌತಿಕ ಮತ್ತು ಆರ್ಥಿಕ ಪ್ರಗತಿಯ ವಿವರಗಳನ್ನು ಚರ್ಚಿಸಿದ ಸಚಿವರು, ಮೇಕೆದಾಟು ಯೋಜನೆಯ ಪ್ರಸ್ತುತ ಹಂತದ ವಿವರಗಳನ್ನು ಹಾಗೂ ಕಾನೂನಾತ್ಮಕ ಕ್ರಮಗಳ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

- Advertisement -


ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖವಾಗಿ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಆದ್ಯತೆ ನೀಡಿ, ಈ ನಿಟ್ಟಿನಲ್ಲಿ ಅಗತ್ಯ ಭೂಸ್ವಾಧೀನ ಪ್ರಕರಣಗಳಿಗೆ ಆದ್ಯತೆ ಮೇಲೆ ಭೂಪರಿಹಾರ ನೀಡುವ ನಿಟ್ಟಿನಲ್ಲಿ ನಿಗಮಗಳಡಿ ಸೂಕ್ತ corpus fund ಸ್ಥಾಪಿಸುವ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ಭೂಸ್ವಾಧೀನತೆ ಪ್ರಕ್ರಿಯೆಯನ್ನು ತೀವ್ರಗತಿಯಲ್ಲಿ ಜರುಗಿಸಲು ಪ್ರಮುಖವಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಮತ್ತು ಇತರೆ ಸಂಬಂಧಿತ ಅನೇಕ ಅಧಿಕಾರಿ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತಾಗಿ ಸರ್ಕಾರದ ಅನುಮೋನದೆಗಾಗಿ ಪ್ರತ್ಯೇಕ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಲಾಯಿತು.

ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಕಾರ್ಯದರ್ಶಿ ಎನ್. ಲಕ್ಷ್ಮಣರಾವ್ ಪೇಶ್ವೆ ಅವರು ಯೋಜನಾ ಕಾಮಗಾರಿಗಳ ಕುರಿತು ವಿಸ್ತೃತವಾಗಿ ವಿವರಿಸಿದರು. ಸಭೆಯಲ್ಲಿ ಕೆಎನ್‌ಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಜೈಪ್ರಕಾಶ್, ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಚಿಣಿ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

- Advertisement -