Home ಟಾಪ್ ಸುದ್ದಿಗಳು ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ರಾಜ್ಯಪಾಲರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ: ಮಂಜುನಾಥ್ ಭಂಡಾರಿ ಕಿಡಿ

ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ರಾಜ್ಯಪಾಲರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ: ಮಂಜುನಾಥ್ ಭಂಡಾರಿ ಕಿಡಿ

►”ಕರ್ನಾಟಕ ಮತ್ತು ಕೇರಳ ಸರಕಾರವನ್ನು ಕೆಡವಲು ಅಮಿತ್ ಶಾ ಷಡ್ಯಂತ್ರ”

ಮಂಗಳೂರು: ‘ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಕೇಂದ್ರ‌ ಸಚಿವ ಅಮಿತ್ ಷಾ ಸೂಚನೆಯಂತೆ ರಾಜ್ಯಪಾಲರು ನಡೆದುಕೊಂಡಿದ್ದಾರೆ. ಸಂವಿಧಾನವನ್ನು ಕಗ್ಗೊಲೆ ಮಾಡಲು ಬಿಜೆಪಿ ರಾಜ್ಯಪಾಲರನ್ನು ಉಪಯೋಗಿಸಿಕೊಂಡಿದೆ, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಥರ ನಡೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದರು.

ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಎಂ‌ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನೀವು ರಾಜ್ಯಪಾಲರಾಗಿ ಬಂದಿದ್ದೀರಾ ಅಥವಾ ರಾಜಕಾರಣ ಮಾಡಲು ಬಂದಿದ್ದೀರಾ? ಎಂದು ರಾಜ್ಯಪಾಲರನ್ನು ಪ್ರಶ್ನಿಸಿದರು.

ಖಾಸಗಿ ವ್ಯಕ್ತಿ ದೂರು ಕೊಟ್ಟಾಗ ಪೂರ್ವಾಪರ ತಿಳಿದುಕೊಳ್ಳದೇ ರಾಜ್ಯಪಾಲರು ತರಾತುರಿ ಮಾಡಿ‌ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ, ರಾಜ್ಯಪಾಲರ ತೀರ್ಮಾನ ಅವರ ಹುದ್ದೆಗೆ ಕಳಂಕ ತಂದಿದೆ, ರಾಜ್ಯಪಾಲರು ನೈತಿಕತೆ ಕಳೆದುಕೊಂಡಿದ್ದಾರೆ ಎಂದರು. ರಾಜ್ಯಪಾಲರು ರಾಜಕಾರಣದ ಪಾಲಕರಾಗಬೇಡಿ, ಪ್ರಜಾಪ್ರಭುತ್ವದ ರಾಜ್ಯಪಾಲರಾಗಿ ಎಂದ ಅವರು, ಕೂಡಲೇ ಕರ್ನಾಟಕದ ರಾಜ್ಯಪಾಲರನ್ನು ಕೇಂದ್ರ‌ಸರ್ಕಾರ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಬಿಜೆಪಿಯೇತರ ಆಡಳಿತ ಇರುವ 9 ರಾಜ್ಯಗಳಲ್ಲಿ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡಿದೆ ಎಂದರು. ಅಮಿತ್ ಶಾ ಅವರು ಕರ್ನಾಟಕದ ಮತ್ತು ಕೇರಳ ಸರಕಾರವನ್ನು ಕೆಡವಲು ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯವರಿಗೆ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಸಿಎಂ ಹೆಸರಿಗೆ ಮಸಿ ಬಳಿದು ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ಅವರು 40 ವರ್ಷಗಳ ರಾಜಕಾರಣದಲ್ಲಿ ನಿಷ್ಕಳಂಕರಾಗಿದ್ದು, ಕರ್ನಾಟಕದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅವರ ಬೆನ್ನಿಗೆ ನಿಲ್ಲಲಿದ್ದೇವೆ ಎಂದರು.

ಇದೇ ವೇಳೆ ಮಾತನಾಡಿದ ದ.ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ರಾಜ್ಯಪಾಲರ ತೀರ್ಮಾನ ದ್ವೇಷ ಮತ್ತು ಮೋಸದ ಕ್ರಮ ಎಂದರು. ರಾಜ್ಯಪಾಲರ ಕಚೇರಿ‌ ದುರ್ಬಳಕೆ ಆಗಿದೆ, ರಾಜ್ಯಪಾಲರು ಕೇಂದ್ರದ ಅಣತಿಯಂತೆ ನಡೆದುಕೊಂಡಿದ್ದಾರೆ, ಮಿಸ್ಟರ್ ಕ್ಲೀನ್ ವ್ಯಕ್ತಿತ್ವದ ಸಿದ್ದರಾಮಯ್ಯರವರ ವರ್ಚಸ್ಸಿಗೆ ಧಕ್ಕೆ ತರಲು ಪ್ರಾಸಿಕ್ಯೂಷನ್‌ಗೆ ಅನುಮತಿ‌ ನೀಡಿದ್ದಾರೆ ಎಂದರು. ಚೆಕ್‌ನಲ್ಲಿ‌ ಲಂಚ ತೆಗೆದುಕೊಂಡವರಿಗೆ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ‌ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿ, ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹಲವು ಕಾರ್ಯತಂತ್ರ ಮಾಡಿದೆ, ಅದರ ಭಾಗವಾಗಿ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದರು. ಬ್ಲ್ಯಾಕ್‌ಮೇಲ್ ಮಾಡುವ ಟಿ.ಜೆ ಅಬ್ರಹಾಂ ದೂರಿಗೆ ಸ್ಪಂದಿಸಿರುವ ರಾಜ್ಯಪಾಲರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದು ಹೇಳಿದರು. ಕರ್ನಾಟಕದ ಜನರು‌ ಸಿದ್ದರಾಮಯ್ಯ ಅವರ ಹಿಂದೆ ಇದ್ದಾರೆ, ಯಾವ ಬೆದರಿಕೆಗಳಿಗೂ ನಾವು ಬಗ್ಗಲ್ಲ ಎಂದರು.

Join Whatsapp
Exit mobile version