ವಿಕಲಾಂಗ ಸ್ನೇಹಿ ಉದ್ಯಾನವನ ಉದ್ಘಾಟಿಸಿದ ರಾಜ್ಯಪಾಲರು

Prasthutha|

ಬೆಂಗಳೂರು: ಮೈಂಡ್ ಟ್ರೀ ಮತ್ತು ಬಾಲಭವನ ಸೊಸೈಟಿ ವತಿಯಿಂದ ನಗರದ ಕಬ್ಬನ್ ಪಾರ್ಕ್ ನ ಬಾಲಭವನದ ಆವರಣದಲ್ಲಿ ನಿರ್ಮಿಸಲಾಗಿರುವ ಅಂಗವಿಕಲ ಮಕ್ಕಳಿಗಾಗಿ ಕರ್ನಾಟಕ ರಾಜ್ಯದ ಮೊದಲ ವಿಶೇಷ ಚೇತನರ ಸ್ನೇಹಿ ಉದ್ಯಾನವನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶನಿವಾರ ಉದ್ಘಾಟಿಸಿದರು.

- Advertisement -

ಬಾಲ ಭವನ ಮತ್ತು ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಮೈಂಡ್ ಟ್ರೀ ಸಂಸ್ಥೆ ವಿಕಲಚೇತನರಿಗೆ ಸುರಕ್ಷಿತ, ಅಂತರ್ಗತ ಮತ್ತು ಭೌತಚಿಕಿತ್ಸೆಯ ಸ್ಥಳವನ್ನು ಒದಗಿಸಲು ಅನನ್ಯವಾಗಿ ವಿನ್ಯಾಸಗೊಳಿಸಿದ ಉದ್ಯಾನವನವನ್ನು ರಚಿಸಿದೆ, ಈ ನೂತನ ಉದ್ಯಾನವನದಲ್ಲಿ ವಿಕಲಾಂಗ ಮಕ್ಕಳು ಯಾವುದೇ ಅಡೆತಡೆಯಿಲ್ಲದೆ ಆಟವಾಡಲು ಸಾಧ್ಯವಾಗುತ್ತದೆ. ವಿಶೇಷ ಅಗತ್ಯವುಳ್ಳ ಲಕ್ಷಾಂತರ ಮಕ್ಕಳು ಈ ಉದ್ಯಾನವನದಿಂದ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಿದರು.

ಅಂಗವಿಕಲರ ಸಬಲೀಕರಣಕ್ಕಾಗಿ ಸಂಸ್ಥೆಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸಿಎಸ್ ಆರ್ ಅಂಗವಾಗಿರುವ ಮೈಂಡ್ ಟ್ರೀ ಫೌಂಡೇಶನ್, ಹಿಂದುಳಿದ ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ, ಅವರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳಿಗೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸುತ್ತಿರುವುುದು ಶ್ಲಾಘನೀಯ ಎಂದರು.

- Advertisement -

ದಿವ್ಯಾಂಗಜನರು ಮಾನವ ಸಂಪನ್ಮೂಲದ ಅವಿಭಾಜ್ಯ ಅಂಗವಾಗಿದ್ದು, ಅವರನ್ನು ಸಮಾಜದ ಮುಖ್ಯ ವಾಹಿನಿಯೊಂದಿಗೆ ಸಂಪರ್ಕಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಭಾರತ ಸರ್ಕಾರದ ವಿಶೇಷ ಚೇತನರ ವ್ಯಕ್ತಿಗಳ ಸಬಲೀಕರಣ ಇಲಾಖೆಯ ಎಡಿಐಪಿ ಯೋಜನೆಯಡಿ ದೃಷ್ಟಿ ವಿಕಲಚೇತನರಿಗೆ ಸ್ಮಾರ್ಟ್ ಫೋನ್, ಡಿಜಿಪ್ಲೇಯರ್ ಮತ್ತು ವಾಕಿಂಗ್ ಸ್ಟಿಕ್ ಮತ್ತು ಸ್ಮಾರ್ಟ್ ಕೇನ್ ಇತ್ಯಾದಿಗಳನ್ನು ನೀಡಲಾಗುತ್ತಿದೆ. ಶ್ರವಣದೋಷವುಳ್ಳ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಯಡಿ 6 ಲಕ್ಷದವರೆಗೆ ಶಸ್ತ್ರಚಿಕಿತ್ಸೆಗೆ ಅವಕಾಶವಿದೆ.

ವಿಶೇಷಚೇತನರು ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಲು ಅಂಗವಿಕಲರ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಅನೇಕ ಯೋಜನೆಗಳ ಮೂಲಕ ವಿಶೇಷ ಚೇತನರ ಸಬಲೀಕರಣವನ್ನು ಮಾಡುತ್ತಿದೆ. ಈ ಸೌಲಭ್ಯಗಳು ಅವರಿಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಹಾಲಪ್ಪ ಆಚಾರ್, ಬಾಲಭವನ ಸೊಸೈಟಿ ಅಧ್ಯಕ್ಷರಾದ ಚಿಕ್ಕಮ್ಮ ಬಸವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ .ಎಂ.ಟಿ.ರೇಜು, ಹಾಗೂ ಇಲಾಖೆಯ ನಿರ್ದೇಶಕರಾದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಮೈಂಡ್ ಟ್ರೀ ಸಂಸ್ಥೆಯ ಸಿಇಓ ದೇಬಾಶಿಸ್ ಚಟರ್ಜಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Join Whatsapp