ನವದೆಹಲಿ : ದೇಶದ ಇತಿಹಾಸದಲ್ಲೇ ಕಂಡರಿಯದ ಆರ್ಥಿಕ ಕುಸಿತ ದಾಖಲಾಗಿದೆ ಎಂದು ಸ್ವಯಂ RBI ಘೋಷಿಸಿದ ಬೆನ್ನಲ್ಲೇ, ಕೇಂದ್ರದ ಬಿಜೆಪಿ ಸರಕಾರದಿಂದ ಮತ್ತೊಮ್ಮೆ ಭರವಸೆಗಳನ್ನು ನೀಡುವ ಭಾಷಣ ಆರಂಭವಾಗಿದೆ. ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದು, ಹಣಕಾಸು ಹಿಂಜರಿತದಿಂದ ಮೇಲೆತ್ತಲು ಹಲವು ಘೋಷಣೆಗಳನ್ನು ಮಾಡಿದ್ದಾರೆ.
ಅದರಲ್ಲಿ ಮುಖ್ಯವಾಗಿ ಉದ್ಯೋಗವಕಾಶಗಳನ್ನು ಸೃಷ್ಟಿಸಲು ‘ಆತ್ಮನಿರ್ಭರ ಭಾರತ ಉದ್ಯೋಗ ಯೋಜನೆ’ಯನ್ನು ಅವರು ಘೋಷಿಸಿದ್ದಾರೆ. ಆತ್ಮ ನಿರ್ಭರ 3.0 ಉತ್ತೇಜಕಗಳ ಭಾಗವಾಗಿ ಈ ಪ್ರಕಟನೆಗಳನ್ನು ಮಾಡಲಾಗಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ ಒ)ಯಲ್ಲಿ ನೋಂದಾಯಿಸಲ್ಪಟ್ಟ ಸಂಸ್ಥೆಗಳಲ್ಲಿ ಸೇರ್ಪಡೆಗೊಂಡಿರುವ ಹೊಸ ನೌಕರರಿಗೆ, ಅಂದರೆ ಈ ವರೆಗೆ ಯಾವತ್ತೂ ಇಪಿಎಫ್ ಒ ಅನ್ವಯವಾಗದ ಹೊಸ ನೌಕರರಿಗೆ ಅಥವಾ ಮಾ.1ರಿಂದ ಸೆ.30ರ ನಡುವೆ ಉದ್ಯೋಗ ಕಳೆದುಕೊಂಡ ನೌಕರರಿಗೆ ಈ ಹೊಸ ಯೋಜನೆ ಅನ್ವಯವಾಗುತ್ತದೆ. ಯೋಜನೆ ಅ.1ರಿಂದ 2021ರ ಜೂನ್ 30ರ ವರೆಗೆ ಅನ್ವಯವಾಗಲಿದೆ.
ಆದರೆ, 50ಕ್ಕಿಂತ ಕಡಿಮೆ ನೌಕರರಿರುವ ಸಂಸ್ಥೆ ಕನಿಷ್ಠ ಇಬ್ಬರು ಹೊಸ ನೌಕರರನ್ನು ನೇಮಕ ಮಾಡಿರಬೇಕು. 50ಕ್ಕಿಂತ ಹೆಚ್ಚು ನೌಕರರು ಇರುವ ಸಂಸ್ಥೆಗೆ ಕನಿಷ್ಠ 5 ಹೊಸ ನೌಕರರನ್ನು ನೇಮಕ ಮಾಡಿಕೊಂಡಿರಬೇಕು.
15,000 ರೂ. ವೇತನ ಪಡೆಯುವ ನೌಕರರನ್ನು ಹೊಂದಿರುವ, 1,000ಕ್ಕಿಂತ ಕಡಿಮೆ ನೌಕರರನ್ನು ಹೊಂದಿರುವ ಸಂಸ್ಥೆಯಲ್ಲಿ ಇಪಿಎಫ್ ಒಗೆ ನೋಂದಾಯಿತರಾಗುವ ನೌಕರರಿಗೆ, ನೌಕರರ ಕಡೆಯಿಂದ ಶೇ.12 ಮತ್ತು ಸಂಸ್ಥೆಯ ಪರವಾಗಿ ಶೇ.12 ಒಟ್ಟು ಶೇ.24 ಮೊತ್ತವನ್ನು ಕೇಂದ್ರ ಸರಕಾರ ಭರಿಸಲಿದೆ ಎಂದು ಅವರು ವಿವರ ನೀಡಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ ನಿಧಿ ಯೋಜನೆಯಡಿ ಸಾಲ ನೀಡಲಾಗಿದೆ. ಈ ವರೆಗೆ 26.62 ಲಕ್ಷ ಅರ್ಜಿಗಳು ಬಂದಿದ್ದವು. ಒಟ್ಟು 1,373 ಕೋಟಿ ರೂ. ಸಾಲ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಡೆವಲಪರ್ ಮತ್ತು ಮನೆ ಖರೀದಿದಾರರಿಗೆ ಆದಾಯ ತೆರಿಗೆ ರಿಲೀಫ್ ಕೂಡ ಅವರು ಘೋಷಿಸಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಪಥದಲ್ಲಿದೆ ಎಂದು ಅವರು ತಿಳಿಸಿದ್ದಾರೆ.