ಮಂಗಳೂರು : ದುಡಿಯುವ ವರ್ಗಕ್ಕೆ ಕೋವಿಡ್ ಕಷ್ಟ ಕಾಲದಲ್ಲಿ ಸರಕಾರ ಘೋಷಣೆ ಮಾಡಿದ ಪರಿಹಾರ ಧನ ಫಲಾನುಭವಿಗಳಿಗೆ ವಿತರಿಸಲು ವಿಳಂಬಿಸುವ ಸರಕಾರದ ನೀತಿಯನ್ನು ಎಸ್ಡಿಟಿಯು ಖಂಡಿಸಿದೆ. ಸಂಕಷ್ಟದಲ್ಲಿ ದಿನದೂಡುತ್ತಿರುವ ಶ್ರಮಿಕ ವರ್ಗದ ಒತ್ತಡಕ್ಕೆ ಮಣಿದು ಸರಕಾರ ಕನಿಷ್ಠ ಪರಿಹಾರ ಘೋಷಣೆ ಮಾಡಿದೆ. ಆದರೆ ಈಗಾಗಲೇ ಸಾಕಷ್ಟು ಆರ್ಥಿಕ ಅನಾನುಕೂಲತೆಯ ನ್ನು ಎದುರಿಸಿದ ಶ್ರಮಿಕ ವರ್ಗಕ್ಕೆ ಸರಕಾರ ಘೋಷಿತ ಪರಿಹಾರ ಧನ ವಿತರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಶ್ರಮಿಕ ವರ್ಗಕ್ಕೆ ಮಾಡುವ ಅನ್ಯಾಯವಾಗಿದೆ.
ಆದ್ದರಿಂದ ದುಡಿಯುವ ವರ್ಗ ನಿರೀಕ್ಷೆಯಲ್ಲಿ ಕಾಯುತ್ತಿರುವ ಸರಕಾರದ ಪರಿಹಾರ ಧನ ಫಲಾನುಭವಿಗಳಿಗೆ ಶೀಘ್ರ ವಿತರಿಸಬೇಕು ಮಾತ್ರವಲ್ಲ ನಿರ್ಬಂಧಿತ ಈ ಸಮಯದಲ್ಲಿ ಫಲಾನುಭವಿಗಳು ಪರಿಹಾರ ಧನ ಪಡೆಯಲು ಸರಕಾರ ಸರಳ ರೀತಿಯಲ್ಲಿ ವ್ಯವಸ್ಥೆಗೊಳಿಸಬೇಕು, ಅರ್ಜಿ ಸಲ್ಲಿಸುವ ಅರ್ಹರಾದ ಎಲ್ಲರಿಗೂ ಸರಕಾರ ಪರಿಹಾರ ಧನ ವಿತರಿಸಬೇಕು ಎಂದು ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಶೆರೀಫ್ ಪಾಂಡೇಶ್ವರ್ ಆಗ್ರಹಿಸಿದ್ದಾರೆ